ಅನಂತಮೂರ್ತಿ ಹೆಗಡೆ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಜಿಲ್ಲಾ ಕಾಂಗ್ರೆಸ್.

ಅಂಕೋಲಾ: ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಅನಂತಮೂರ್ತಿ ಹೆಗಡೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಪ್ರಭುದ್ಧ ನಾಯಕ ದೇಶಪಾಂಡೆಯವರ ಅಭಿವೃದ್ಧಿಯ ಕಾರ್ಯದ ಬಗ್ಗೆ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಾಯಿ ಗಾಂವಕರ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆನ್ನುವುದು ಕಾಂಗ್ರೆಸ್ ಪಕ್ಷವೂ ಸೇರಿದಂತೆ ಎಲ್ಲರ ಅಭಿಲಾಷೆಯಾಗಿದೆ. ಈ ಹಿಂದೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿದ್ದಾಗ ಆ ಕುರಿತು ಮಾತನಾಡದೆ ಚುನಾವಣೆಯ ಸಂದರ್ಭದಲ್ಲಿ ಪಾದಯಾತ್ರೆ ಮಾಡುತ್ತಿರುವ ಅನಂತಮೂರ್ತಿ ಹೆಗಡೆ ದೇಶಪಾಂಡೆ ಅವರಿಗೆ ಅಭಿವೃದ್ಧಿಯ ಕುರಿತು ಮಾತನಾಡುತ್ತಿರುವುದು ಹಾಸ್ಯಸ್ಪದ. ಕೈಗಾರಿಕಾ ಸಚಿವರಾಗಿ ಆರ್ ವಿ ದೇಶಪಾಂಡೆ ಜಿಲ್ಲೆ ಮತ್ತು ರಾಜ್ಯದಲ್ಲಿ ಪ್ರಶಂಶನೀಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ಸಿ ಆರ್ ಜೆಡ್, ಪರಿಸರ ಹೋರಾಟಗಳಂತಹ ಸಮಸ್ಯೆಗಳ ನಡುವೆಯೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವಗಳನ್ನೇ ಆರಂಭಿಸಿದವರು ದೇಶಪಾಂಡೆಯವರು ಎಂದರು.
ನೇತ್ರಾಣಿ ಸ್ಕೂಬಾ ಡೈವಿಂಗ್, ಕರಾವಳಿ ತೀರದಲ್ಲಿ ಮತ್ತು ದಾಂಡೇಲಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ದೇಶಪಾಂಡೆಯವರ ಅಧಿಕಾರ ಅವಧಿಯಲ್ಲಿ ಕೈಗೊಂಡ ಹೊಸ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಗಾಂವಕರ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಮುತ್ಸದ್ದಿ ರಾಜಕಾರಣಿ ಎಂದು ಹೆಸರಾಗಿರುವ ಆರ್ ವಿ ದೇಶಪಾಂಡೆ ಅವರ ಬಗ್ಗೆ ಹೇಳುವ ನೈತಿಕತೆ ಅನಂತ ಮೂರ್ತಿ ಹೆಗಡೆಯವರಿಗಿಲ್ಲ. ರಾಜಕಾರಣದ ಗಂಭೀರತೆಯು ಇಲ್ಲದ ಅವರದ್ದು ವೈಯಕ್ತಿಕ ಲಾಭದ ಹೇಳಿಕೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ, ಅನಂತಮೂರ್ತಿ ಹೆಗಡೆ ಮತ್ತು ಆರ್ ವಿ ದೇಶಪಾಂಡೆ ಅವರ ನಡುವೆ ವಯಸ್ಸಿನ ಹಾಗೂ ರಾಜಕೀಯ ಅನುಭವದಲ್ಲಿ ಅಜಗಜಾಂತರ ಅಂತರವಿದೆ. ದೊಡ್ಡವರ ವಿರುದ್ಧ ಮಾತನಾಡಿ ಮುಂದಿನ ಲೋಕಸಭೆ ಚುನಾವಣೆಗೆ ಟಿಕೆಟ್ ಪಡೆಯಬಹುದು ಎನ್ನುವ ಭ್ರಮೆಯಲ್ಲಿ ಅವರಿದ್ದಾರೆ. ಚುನಾವಣೆಗೆ ಟಿಕೆಟ್ ಪಡೆಯುವುದೇ ಅವರ ಆಶಯವಾಗಿದೆ ಎಂದರು.
ಮಾಜಿ ಶಾಸಕ ಕೆ ಎಚ್ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ ನಾಯಕ ಮಾತನಾಡಿದರು. ಪ್ರಮುಖರಾದ ಬಿ.ಡಿ. ನಾಯ್ಕ, ರಾಜು ಹರಿಕಂತ್ರ, ರಾಜೇಶ್ ನಾಯ್ಕ, ಸುರೇಶ್ ನಾಯ್ಕ ಅಸ್ಲಗದ್ದೆ , ಶಾಂತಿ ಆಗೇರ ಮತ್ತಿತರರು ಇದ್ದರು.