ಅಂಕೋಲಾ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ಸಂಗಮ ಸೇವಾ ಸಂಸ್ಥೆ ಬಾಳೆಗುಳಿ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ಭಾವಗೀತೆ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಪಟ್ಟಣದ ಜೈಹಿಂದ್ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿ ನಮ್ಮ ಕನ್ನಡ ನಮ್ಮ ನಾಡು ಇದರ ಬಗ್ಗೆ ಗೌರವವನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ತುಂಬ ಸಹಕಾರಿಯಾಗಿದೆ. ಶಿಕ್ಷಣ ಮಾದ್ಯಮ ಯಾವುದೇ ಇದ್ದರೂ ಕನ್ನಡತನದ ಬಗ್ಗೆ ಹೆಚ್ಚು ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕಸಾಪ ಘಟಕದವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಮಾತನಾಡಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯಾವಂತರಿರುವ ಅಂಕೋಲಾ ತಾಲೂಕಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕ್ರತಿ ಮತ್ತು ಸಾಂಸ್ಕ್ರತಿಕ ಗುಣವನ್ನು ಕಲಿಸುವದು ಉತ್ತಮ. ಮಕ್ಕಳ ಸರ್ವಾಂಗೀಣ ಅಭಿವೃಧ್ದಿಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಜೀವನದ ಪ್ರತಿಯೊಂದು ಕ್ಷಣವೂ ಸ್ಪರ್ಧಾತ್ಮಕವಾಗಿರಬೇಕು ಎಂದರು.
ಕಸಾಪ ತಾಲೂಕಾ ಆಧ್ಯಕ್ಷ ಗೋಪಾಲಕೃಷ್ಣ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಯಾವುದೇ ಕಾರ್ಯಕ್ರಮಗಳಿಗೆ ಜಾರ್ಜ್ ಫರ್ನಾಂಡಿಸ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರ ವಿಶೇಷವಾಗಿದೆ. ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ನಾವು ಕನ್ನಡ ನಾಡಿಗೆ ನೀಡುವ ಒಂದು ಕೊಡುಗೆಯಾಗುತ್ತದೆ. ವಿದ್ಯಾರ್ಥಿಗಳು ಭಾವಗೀತೆಗಳನ್ನು ಹಾಡುವದರಿಂದ ಶ್ರೇಷ್ಠ ಸಾಹಿತಿಗಳು ರಚಿಸಿದ ಕೃತಿಗಳ ಪರಿಚಯದ ಜೊತೆಗೆ ಅವುಗಳ ಆಂತರ್ಯದ ಅರಿವಾಗುತ್ತದೆ ಎಂದರು. ವೇದಿಕೆಯಲ್ಲಿ ಜೈಹಿಂದ್ ಹೈಸ್ಕೂಲ್ ಹಿರಿಯ ಶಿಕ್ಷಕಿ ರೋಹಿಣಿ ನಾಯಕ, ವಿಶ್ರಾಂತ ಪ್ರಾಚಾರ್ಯ ಪ್ರೊ.ಮೋಹನ ಹಬ್ಬು, ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಕಾರ್ಯದರ್ಶಿ ಜಿ ಆರ್ ತಾಂಡೇಲ ಸ್ವಾಗತಿಸಿದರು. ಕಸಾಪ ಸದಸ್ಯ ಸುಜೀತ ನಾಯ್ಕ ವಂದಿಸಿದರು.
ತಿಮ್ಮಣ್ಣ ಭಟ್ ಸಂಘಟನೆಗೆ ಸಹಕರಿಸಿದರು. ನಿರ್ಣಾಯಕರಾಗಿ ನಾಗರಾಜ ಜಾಂಬಳೇಕರ, ಮೋಹನ ಹಬ್ಬು, ಜೆ ಪ್ರೇಮಾನಂದ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಘಟಕದ ಸದಸ್ಯ ಜಯಶೀಲ ಆಗೇರ, ಜೈಹಿಂದ್ ಹೈಸ್ಕೂಲಿನಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು. ಭಾವಗೀತೆ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಕೇಣಿಯ ಸೌಜನ್ಯ ಸಿದ್ದಿ ಪ್ರಥಮ ಪಿ ಎಂ ಆಂಗ್ಲ ಮಾದ್ಯಮ ಪ್ರೌಢಶಾಲೆಯ ಅನಘಾ ರವಿ ನಾಯ್ಕ ದ್ವಿತೀಯ ಪಿ ಎಂ ಕನ್ನಡ ಮಾದ್ಯಮ ಪ್ರೌಢಶಾಲೆಯ ಅಕ್ಷತಾ ಚಂದ್ರಕಾಂತ ಗೌಡ ತೃತೀಯ ಸ್ಥಾನ ಪಡೆದರು. ಜನ್ಮಿತಾ ಕಾಶೀನಾಥ ಹರಿಕಾಂತ ಮತ್ತು ಚೈತ್ರಾ ಎಂ ಗೌಡ ಸಮಾಧಾನಕರ ಬಹುಮಾನ ಪಡೆದರು.