ಅಂಕೋಲಾ: ಅಂಕೋಲಾ ತಾಲೂಕಿನ ಬೇಲೆಕೇರಿಯ ಸಮುದ್ರ ತಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಅನುದಿನ ಅನುಸ್ಪಂದನ ಕಾರ್ಯಕ್ರಮದ ಅಂಗವಾಗಿ ಪರಿಸರ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಖ್ಯಾತ ವಕೀಲ ಸುಭಾಷ್ ನಾರ್ವೇಕರ ಮಾತನಾಡಿ ಪರಿಸರ ಮಾಲಿನ್ಯದಿಂದ ರಾಷ್ಟ್ರದ ರಾಜಧಾನಿ ದೆಹಲಿ ಗ್ಯಾಸ್ ಚೇಂಬರ್ ನಂತಾಗಿದ್ದು ಮಾನವ ವಸತಿಗೆ ಆರೋಗ್ಯಕರವಾಗಿಲ್ಲ. ಇದು ಮಾನವ ಕುಲಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಪರಿಸರ ಸುರಕ್ಷಿತವಾಗಿದ್ದರೆ ನಾವೆಲ್ಲ ಉಳಿಯುತ್ತೇವೆ. ಪರಿಸರದ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಸ್ವಚ್ಛತಾ ಅಭಿಯಾನಕ್ಕೆ ಬೆಂಬಲವಾಗಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಶಿಕ್ಷಣ ಪ್ರೇಮಿ ದಿ. ವಿದ್ಯಾಬಾಯಿ ನಾರ್ವೇಕರ ಅವರ ಸ್ಮರಣಾರ್ಥ ಸಮುದ್ರ ತಟದಲ್ಲಿ ಸಸಿಯನ್ನು ನೆಡಲಾಯಿತು. ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅಕ್ಷತಾ ಕೃಷ್ಣಮೂರ್ತಿಯವರನ್ನು ಕಸಾಪ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿಯತ್ರಿ ಹೊನ್ನಮ್ಮ ನಾಯಕರವರು ಅಕ್ಷತಾರವರ ಬದುಕು ಸಾಧನೆಯನ್ನು ಪರಿಚಯಿಸಿದರು.
ಹಿರಿಯ ಜಾನಪದ ತಜ್ಞ ಎನ್.ಆರ್. ನಾಯಕ, ಅಣಸಿಯಂತಹ ದಟ್ಟಡವಿಯ ಮಧ್ಯದ ಸರಕಾರಿ ಶಾಲೆಯ ಶಿಕ್ಷಕಿಯಾಗಿ ಅಕ್ಷತಾ ಮಾಡಿದ ಸೇವೆ ಅನುಪಮವಾದದ್ದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಂಕೋಲಾ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ಕರ್ನಾಟಕ ನಾಮಕರಣದ 50 ನೇ ವರ್ಷದ ಸಂಭ್ರಮದಲ್ಲಿ ಅಂಕೋಲಾ ಕಸಾಪ ಕನ್ನಡ ಹಿರಿಮೆ-ಗರಿಮೆ ಕುರಿತು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲಿದೆಯೆಂದರು.
ಬೇಲೆಕೇರಿ ಗ್ರಾಮ ಪಂಚಾಯತ ಅಧ್ಯಕ್ಷೆ ಸಹನಾ ನಾಯಕ, ಸಾಮಾಜಿಕ ಕಾರ್ಯಕರ್ತ ಕೇಶವಾನಂದ ನಾಯಕ ಉಪಸ್ಥಿತರಿದ್ದು ಮಾತನಾಡಿದರು. ಕು. ವೈಷ್ಣವಿ ನಾಯಕರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕಸಾಪ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಎಂ.ಬಿ.ಆಗೇರ ವಂದಿಸಿದರು.