ಅಂಕೋಲಾ: ಕಲಿಸಿದ ಗುರುಗಳನ್ನು ಗೌರವಿಸಿ, ತಾರುಣ್ಯದ ದಿನಗಳನ್ನು ಕಳೆದ ಕಾಲೇಜಿನ ಕ್ಯಾಂಪಸಿನಲ್ಲಿ ಹಳೆಯ ವಿದ್ಯಾರ್ಥಿಗಳು ಇಳಿವಯಸ್ಸಿನ ಹಂಗನ್ನು ಹರಿದು ವಿಹರಿಸಿದ ಅಪೂರ್ವ ಕ್ಷಣಕ್ಕೆ ಭಾನುವಾರ ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜು ಸಾಕ್ಷಿಯಾಯಿತು.
ಕಳೆದ ಐವತ್ತು ವರ್ಷಗಳ ಹಿಂದೆ ಅಂದರೆ 1966 ರಿಂದ 1971 ರವರೆಗೆ ವ್ಯಾಸಂಗ ಮಾಡಿದ ಈ ಕಾಲೇಜಿನಲ್ಲಿ ಮಿತ್ರರನ್ನು ಸೇರಿಕೊಂಡು ಸಂತೋಷ ಕೂಟ ನಡೆಸಬೇಕೆಂಬ ಯೋಜನೆಯನ್ನು ಹಳೆಯ ವಿದ್ಯಾರ್ಥಿಗಳಾದ ಮುಂಬೈ ಹೈಕೊರ್ಟ ನಿವೃತ್ತ ನ್ಯಾಯಾದೀಶ ಜಯಪ್ರಕಾಶ ದೇವದರ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಲೋಕನಾಥ ಕಾನಡೆ, ಬ್ಯಾಂಕ ಅಧಿಕಾರಿಗಳಾದ ಸುರೇಶ ಶೇಣ್ವಿ, ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಅನಿಲ್ ಭಟ್, ಯುಜಿಸಿ ಸಲಹಾ ಮಂಡಳಿ ಸದಸ್ಯರಾಗಿದ್ದ ಡಾ. ಆನಂದು ಶೇಣ್ವಿ, ಅಮೃತ ಬಜಾರ, ಹಿಂದು ಮುಂತಾದ ಪತ್ರಿಕಾ ಬಳಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಮೋಹನ ಬಸರೂರು ಸೇರಿದಂತೆ ಹಲವಾರು ಮಹನಿಯರು ಭಾನುವಾರ ಕಾಲೇಜಿಗೆ ಬೇಟಿ ನೀಡಿದರು.
ಸನ್ಮಾನ ; ಈ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಪ್ರಾಧ್ಯಾಪಕರಾದ ಎಂ. ಎಸ್. ಹಬ್ಬು, ನಿರ್ಮಲಾ ಗಾಂವಕರ ಮತ್ತು ಎ.ಡಿ ಗಾಂವಕರ ಅವರನ್ನು ಶಾಲು ಹೊದಿಸಿ ಸ್ಮರಣಿಕೆ, ಫಲ ತಾಂಬೂಲ ನೀಡಿ ಸನ್ಮಾನಸಿ ಸಂತಸ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸಿದ್ಧಲಿಂಗಸ್ವಾಮಿ ವಸ್ತçದ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ಮರೆವು ಎಂಬುದು ಈ ಕಾಲದ ವಾಸ್ತವ ಆದರೆ ದೈನಂದಿನ ಜೀವನದ ಒತ್ತಡಗಳ ನಡುವೆಯು ಹಳೆಯ ಗೆಳೆಯರೊಂದಿಗೆ ಕೂಡಿಕೊಂಡು ಕಲಿತ ಸಂಸ್ಥೆಯನ್ನು, ಕಲಿಸಿದ ಗುರುಗಳನ್ನು ಗೌರವಿಸಿದ ಹಳೆಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕೆನರಾ ವೆಲ್‌ಫೆರ್ ಟ್ರಸ್ಟಿನ ಕಾರ್ಯದರ್ಶಿ ಕೆ. ವಿ. ಶೆಟ್ಟಿ, ಟ್ರಸ್ಟಿಗಳಾದ ವಿ. ಎನ್. ನಾಯಕ, ಆಡಳಿತ ಮಂಡಳಿಯ ಸದಸ್ಯ ವಿ. ಆರ್. ಕಾಮತ, ನಿವೃತ್ತ ಲೆಕ್ಕಾಧಿಕಾರಿ ಆನಂದು ಶೆಟ್ಟಿ, ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಸುಜಾತಾ ಲಾಡ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಾಗಶ್ರೀ ಸಂಗಡಿಗರು ಪ್ರಾರ್ಥನೆ ಹಾಡಿದರು. ಶಶಿಕಾಂತ ಹೆಗಡೆ ನಿರೂಪಿಸಿ ವಂದಿಸಿದರು.