ಅಂಕೋಲಾ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಕಾರವಾರ, ಸಂಗಮ ಸೇವಾ ಸಂಸ್ಥೆ, ಬಾಳೆಗುಳಿ, ಅಂಕೋಲಾ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಇ-ವೇಸ್ಟ್ ದಿನಾಚರಣೆಯ ಅಂಗವಾಗಿ ದಿನಾಂಕ 16 ಅಕ್ಟೋಬರ್ 2023 ರಂದು “ಇ-ವೇಸ್ಟ್ ನಿರ್ವಹಣೆ” ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರವಾರದ ಪರಿಸರ ಅಧಿಕಾರಿಗಳಾದ ಬಿ.ಕೆ. ಸಂತೋಷ್, ಪರಿಸರ ಮಾಲಿನ್ಯ ತಡೆಗಟ್ಟಲು ಮಾಲಿನ್ಯ ನಿಯಂತ್ರಣ ಮಂಡಳಿಯು ನಿರಂತರ ಕಾರ್ಯಪ್ರವೃತ್ತವಾಗಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಹಾಗೂ ಪ್ರತಿಯೊಬ್ಬ ನಾಗರೀಕರಲ್ಲಿಯೂ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು ಮಂಡಳಿಯ ಪ್ರಮುಖ ಕೆಲಸವಾಗಿದೆ ಎಂದು ತಿಳಿಸಿದರು. ಮುಖ್ಯ ಉಪಾನ್ಯಾಸಕರಾಗಿ ಆಗಮಿಸಿ ಮಾತನಾಡಿದ ಉಪಪರಿಸರ ಅಧಿಕಾರಿಗಳಾದ ಡಾ. ಗಣಪತಿ ಹೆಗಡೆ, ಇ-ವೇಸ್ಟ್ ಎಂದರೆ ಏನು? ಇ-ವೇಸ್ಟ್ನಿಂದ ಪರಿಸರ ಹೇಗೆ ಮಲಿನಗೊಳ್ಳುತ್ತಿದೆ? ಎಂಬುದನ್ನು ವಿವರಿಸುತ್ತಾ, ಹಳೆಯ ಎಲೆಕ್ಟ್ರಾನಿಕ್ ಉಪಕರಣಗಳ ಕಸವನ್ನು ಕಡಿಮೆ ಮಾಡುವುದು, ಮರುಬಳಕೆ ಮಾಡುವುದು ಮತ್ತು ಪುನರ್ ಬಳಕೆಗೆ ಸಾಧ್ಯವಾಗುವಂತೆ ನವೀಕರಿಸುವುದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು. ನಾವೆಲ್ಲರೂ ಸೇರಿ ಮುಂದಿನ ದೀಪಾವಳಿಯನ್ನು ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಿಸೋಣ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾರದಾ ಎಸ್ ಭಟ್, ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಸಿಬ್ಬಂದಿಗಳು ಕೈಜೋಡಿಸಿ ಇ-ವೇಸ್ಟ್ ನಿರ್ವಹಣೆಯ ಕಾರ್ಯಗಳನ್ನು ಕೈಗೊಳ್ಳೋಣ ಎಂದು ಸಂದೇಶ ನೀಡಿದರು.
ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಎನ್ ಶೆಟ್ಟಿ ಇವರು ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜ್ಞಾನ ವೇದಿಕೆಯ ಸಂಚಾಲಕರಾದ ಗಿರೀಶ್ ಸ್ವಾಗತಿಸಿದರು. ಕೆಎಲ್ಇ ಸಂಸ್ಥೆಯ ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರ ತಿಮ್ಮಣ್ಣ ಭಟ್ ವಂದಿಸಿದರು. ವಿದ್ಯಾರ್ಥಿನಿಯರಾದ ಪವಿತ್ರ ಮತ್ತು ಸಾಧನಾ ಪ್ರಾರ್ಥಿಸಿದರು. ಆಶ್ರಿತಾ ಕಾರ್ಯಕ್ರಮ ನಿರೂಪಣೆ ಮಾಡಿದರು.