ಜೋಯಿಡಾ : ಬಿಜೆಪಿ ಸರಕಾರವನ್ನು 40% ಸರಕಾರ ಎಂದು ಹೇಳುತ್ತಾ ದಾಖಲೆ ಕೊಡಲು ವಿಫಲವಾದ ಕಾಂಗ್ರೆಸ್ ಸರಕಾರ ಭಾರಿ ಪ್ರಮಾಣದ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮಾಜಿ ಶಾಸಕರಾದ ಸುನೀಲ್ ಹೆಗಡೆ ಹೇಳಿದರು.
ಅವರು ಬುಧವಾರ ಜೊಯಿಡಾದ ಶಿವಾಜಿ ವೃತ್ತದ ಬಳಿ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಎಳೆ ಎಳೆಯನ್ನು ವಿವರಿಸುತ್ತಾ, ಕಾಂಗ್ರೆಸ್ ಈ ಸರಕಾರ ಕೇಂದ್ರ ಕಾಂಗ್ರೆಸ್ಸಿಗರ ಎಟಿಎಂ ಆಗಿದೆ. ದಿಲ್ಲಿಯ ಹೈಕಮಾಂಡ್ ನ್ನು ತೃಪ್ತಿ ಪಡಿಸುವಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ. ತಾನು ಮುಖ್ಯಮಂತ್ರಿಯಾಗಬೇಕೆಂದು ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರ ಮಾಡಿ ಕೇಂದ್ರದ ಕಾಂಗ್ರೆಸ್ಸಿಗರನ್ನು ತೃಪ್ತಿ ಪಡಿಸಲು ಹೊರಟಿದ್ದಾರೆ. ಗೃಹಲಕ್ಷ್ಮೀ ಎಂದು ಹೆಣ್ಣು ಮಕ್ಕಳು ಈಗ ಬೀದಿಗೆ ಬಿದ್ದು ತಮಗೆ ಹಣ ಬಂದಿದೆಯೇ ಎಂದು ಹುಡುಕಾಡುತ್ತಿದ್ದಾರೆ. ಉಚಿತ ಸಾರಿಗೆ ನೆಪದಲ್ಲಿ ಬಸ್ಸಿಗೆ ಟೈಯರ್ ಹಾಕಲೂ ಸಾರಿಗೆ ನಿಗಮದಲ್ಲಿ ಹಣವಿಲ್ಲ. ವಿದ್ಯುತ್ ಇಲ್ಲ, 5 ಕಿಲೋ ಅಕ್ಕಿನೂ ಇಲ್ಲ, ಹಣನೂ ಇಲ್ಲದಂತಾಗಿದೆ. ಕೇಂದ್ರ ಸರಕಾರದ ವಂತಿಗೆಯಲ್ಲಿ ರಾಜ್ಯ ಸರ್ಕಾರ ನಡೆಯುತ್ತಿದೆ. ಹಲವಾರು ಯೋಜನೆಗಳಿಗೆ ಹಣವಿಲ್ಲದೆ ಕಾಮಗಾರಿ ನಿಂತಿದೆ. ಹಿಂದೆ ಬಿಜೆಪಿ ಸರಕಾರವನ್ನು ದೂರುತ್ತಿದ್ದ ಗುತ್ತಿಗೆದಾರರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ನಮ್ಮ ರಾಜ್ಯದ ಅಭಿವೃದ್ಧಿಗೆ ಸಿಗಬೇಕಾದ ಹಣ ಬೇರೆ ರಾಜ್ಯಗಳ ಚುನಾವಣೆಗೆ ರಾಜ್ಯ ಸರಕಾರ ಬಳಸಲು ಮುಂದಾಗಿದೆ. ಕಸ್ತೂರಿ ರಂಗನ್ ವರದಿಯಿಂದ ಜೊಯಿಡಾದ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಶಾಸಕ ಆರ್.ವಿ. ದೇಶಪಾಂಡೆಯವರು ಕೂಡಲೇ ಎಚ್ಚೆತ್ತು ಸರಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇಲ್ಲದೆ ಹೋದಲ್ಲಿ ತಾಲೂಕಿನ ಅಸ್ತಿತ್ವವೇ ಉಳಿಯದಂತ ಸ್ಥಿತಿ ನಿರ್ಮಾಣವಾಗಲಿದೆ. ಕಾಂಗ್ರೆಸ್ ಸರಕಾರ ತನ್ನ ತಪ್ಪನ್ನು ಸರಿಪಡಿಸಿಕೊಂಡು ಹೋಗದೆ ಇದ್ದಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈ ಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ರೆಡ್ಕರ್, ಸುಭಾಷ ಮಾಂಜ್ರೆಕರ್, ಅರುಣ್ ಕಾಮ್ರೇಕರ್, ಸಿದ್ದು ಜೋಕೆರಿ , ಅನಿಲ್ ಪಟ್ಸೆ, ರಾಮಕೃಷ್ಣ ದಾನಗೆರಿ, ಗಿರೀಶ್ ನಾಯ್ಕ, ಗುರಪ್ಪ ಹಣಬರ, ರೂಪೇಶ್, ಸಂದೀಪ್ ನಗರಿ ಮೊದಲಾದವರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.