ಸರ್ವರ್ ಸಮಸ್ಯೆಯಿಂದ ಪಡಿತರಕ್ಕಾಗಿ ಅಲೆದಾಡುತ್ತಿರುವ ಜೋಯಿಡಾ ತಾಲೂಕು ಕೇಂದ್ರದ ಸುತ್ತಮುತ್ತಲ ಜನತೆ :ಪರ್ಯಾಯ ಕ್ರಮಕ್ಕಾಗಿ ಮನವಿ

ಜೋಯಿಡಾ : ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕಾಗಿರುವ ಜೋಯಿಡಾ ಸಮಸ್ಯೆಗಳ ವಿಚಾರದಲ್ಲಿಯೂ ಕೂಡ ತನ್ನದೇ ಆದ ರೀತಿಯಲ್ಲಿ ಮುದುಡಿಕೊಂಡಿದೆ.

ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವಖ್ಯಾತಿಯನ್ನು ಪಡೆದ ಜೋಯಿಡಾ ತಾಲ್ಲೂಕು ನೆಟ್ವರ್ಕ್ ವಿಚಾರದಲ್ಲಿ ಮಾತ್ರ ಬಾರಿ ಹಿನ್ನಡೆಯನ್ನು ಕಂಡಿದೆ. ತುರ್ತು ಸಂದರ್ಭದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮೊಬೈಲ್ ಇಲ್ಲವೇ ದೂರವಾಣಿ ಮೂಲಕ ಸಂಪರ್ಕ ಸಾಧಿಸುವುದೇ ಕಷ್ಟ ಸಾಧ್ಯವಾಗಿದೆ. ಮೊದಲೇ ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ತಾಲೂಕು ಕೇಂದ್ರದ ಜನತೆ ನೆಟ್ವರ್ಕ್ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಪಡಿತರಕ್ಕಾಗಿ ದಿನಗಟ್ಟಲೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೂಲಿನಾಲಿ ಬದುಕು ನಡೆಸುವ ಜನರು ತಿಂಗಳ ಪಡಿತರಕ್ಕಾಗಿ ನೆಟ್ವರ್ಕ್ ಮತ್ತು ಸರ್ವರ್ ಸಮಸ್ಯೆಯಿಂದ ಪಡಿತರ ಅಂಗಡಿಗೆ ಮೂರ್ನಾಲ್ಕು ದಿನ ಅಲೆಯ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ರೋಸಿ ಹೋಗಿರುವ ಜೋಯಿಡಾ ತಾಲೂಕು ಕೇಂದ್ರದ ಸುತ್ತಮುತ್ತಲ ಜನತೆ ಈ ಹಿಂದಿನಂತೆ ಮ್ಯಾನ್ವಲ್ ಮೂಲಕ ಪಡಿತರವನ್ನು ವಿತರಣೆ ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮಂಗಳವಾರ ಮಾಧ್ಯಮದ ಮೂಲಕ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಮನವಿಯನ್ನು ಮಾಡಿದ್ದಾರೆ.