ಜೋಯಿಡಾ : ತಾಲೂಕು ಕೇಂದ್ರದಲ್ಲಿರುವ ಜೋಯಿಡಾ ಸೇವಾ ಸಹಕಾರಿ ಸಂಘವು ಯಲ್ಲಾಪುರದ ಟಿ.ಎಸ್.ಎಸ್ ಸಂಘದಿಂದ ಪಡೆದ ಸಾಲದ ಮೊತ್ತವನ್ನು ಕ್ರಮವತ್ತಾಗಿ ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಅಸಲು ಸಹಿತ ಬಡ್ಡಿ ಸೇರಿ ಪಾವತಿಸುವಂತೆ ಜೋಯಿಡಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಂಘದ ಆಡಳಿತ ಮಂಡಳಿಯ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದೆ.
ಜೋಯಿಡಾ ಸೇವಾ ಸಹಕಾರಿ ಸಂಘವು ಯಲ್ಲಾಪುರದ ಟಿ.ಎಸ್.ಎಸ್ ಸಂಘದಿಂದ ಪಡೆದ ಸಾಲದ ಮೊತ್ತದ ಪೈಕಿ ಅಸಲು ರೂ: 3,60,48,500/- ಮತ್ತು ಸಾಲದ ಮೇಲಿನ ಬಡ್ಡಿ ರೂ : 13,69,721/- ಸೇರಿ ಒಟ್ಟು ರೂ: 3,74,18,221/- ಬಾಕಿ ಇರುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಘದ ಗಮನಕ್ಕೆ ತಂದರು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಈ ನಿಟ್ಟಿನಲ್ಲಿ ಸಾಲದ ಮೊತ್ತದ ಮರುಪಾವತಿಗಾಗಿ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ ಕಲಂ 70ರ ಅನ್ವಯ ವಸೂಲಿ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತದೆ ಎಂದು ಯಲ್ಲಾಪುರದ ಟಿಎಸ್ಎಸ್ ಸಂಘವು ಜೋಯಿಡಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಮುಕುಂದ ನಾಯ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಾ ನಾಯ್ಕ, ಸೇರಿದಂತೆ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಪ್ರಕಾಶ್ ವೇಳಿಪ್, ಚಂದ್ರಕಾಂತ್ ಗಾವಡಾ, ಸದಾನಂದ ದಬಗಾರ, ದ್ಯಾಮಾಂವ್ ಮಂಥೇರೋ, ಮ್ಹಾಬಳು, ಮಹಾದೇವ ತವಡಕರ, ಸತೀಶ್ ನಾಯ್ಕ, ಅಜೀತ್ ಟೆಂಗ್ಸೆ, ಪ್ರಿಯಾ ಪ್ರದೀಪ್ ಪಾಟೀಲ್, ಲೀಲಾ ಗೋಪಾಲ್ ವೇಳಿಪ್ ಮೊದಲಾದವರ ಮೇಲೆ ನೋಟಿಸ್ ಜಾರಿ ಮಾಡಿದೆ.
ಈಗಾಗಲೇ ಕೋಟ್ಯಾಂತರ ರೂಪಾಯಿ ಅವ್ಯವಹಾರದಲ್ಲಿ ಸಿಲುಕಿ ಒದ್ದಾಡುತ್ತಿರುವ ಜೋಯಿಡಾ ಸೇವಾ ಸಹಕಾರಿ ಸಂಘಕ್ಕೆ ಇದೀಗ ಮತ್ತೊಂದು ಕಂಠಕ ಎದುರಾಗಿದೆ. ಒಟ್ಟಿನಲ್ಲಿ ಸಂಘದಲ್ಲಿ ಉಳಿತಾಯ, ಶೇರು, ಡಿಪೋಸಿಟ್ ಹಣವಿಟ್ಟವರಲ್ಲಿ ಮತ್ತಷ್ಟು ಅಭದ್ರತೆ ಹಾಗೂ ಆತಂಕ ಮನೆ ಮಾಡಿದೆ.
ಸಂದೇಶ ಜೈನ್ ನುಡಿಸಿರಿ ನ್ಯೂಸ್ ಜೋಯಿಡಾ