ಅಂಕೋಲಾ : ಪ್ರಜಾಪ್ರಭುತ್ವ ಪದ್ದತಿಯಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು ಕಾನೂನಿನ ಪರಿಮಿತಿಯಲ್ಲೇ ಆಡಳಿತವನ್ನೂ ನಡೆಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಮನೋಹರ ಎಂ ಹೇಳಿದರು. ಅವರು ಜಿಲ್ಲಾ ಪಂಚಾಯತ ಉ.ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ವಕೀಲರ ಸಂಘ ಅಂಕೋಲಾ, ಕೆಎಲ್ಇ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಕೆಎಲ್ಇ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡ ಮಾನಸಿಕ ಆರೋಗ್ಯ ಕುರಿತು ಅರಿವು ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾರೇ ಆಗಲೀ ಸ್ವೇಚ್ಛೆಯಿಂದ ಆಡಳಿತ ನಡೆಸಲು ಬರುವುದಿಲ್ಲ. ಆಡಳಿತ ನಡೆಸುವದು ನಿರ್ದಿಷ್ಠ ಕಾನೂನುಗಳೇ ಹೊರತು ವ್ಯಕ್ತಿಯಲ್ಲ. ಇಂತಹ ಕಾನೂನುಗಳ ಕುರಿತು ಜನಸಾಮಾನ್ಯರೂ ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು. ತಾಲೂಕಾ ದಂಡಾಧಿಕಾರಿ ಅಶೋಕ ಭಟ್ ದುಶ್ಚಟಗಳಿಂದ ದೂರವಿದ್ದರೆ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವುಗಳ ಕುರಿತು ಸದಾ ಜಾಗರೂಕರಾಗಿರಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ಮಾತನಾಡಿ ಕಾನೂನಿನ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಕಾನೂನಿನ ವಿಚಾರಗಳನ್ನು ಮನದಟ್ಟುಮಾಡಿಕೊಳ್ಳುವದು ಒಳ್ಳೆಯದು ಎಂದು ಸಲಹೆ ನೀಡಿದರು. ನೋಟರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗಾನಂದ ಬಂಟ ಮಾತನಾಡಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವದರ ಮಹತ್ವ ಮತ್ತು ಮಾನಸಿಕ ರೋಗಗಳ ಕಾರಣಗಳ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯ ಅಧಿಕಾರಿ ಜಗದೀಶ ನಾಯ್ಕ ಮಾನಸಿಕ ರೋಗಿಗಳನ್ನು ಗುರುತಿಸಿ ಪ್ರಾರಂಭದಲ್ಲೇ ಸೂಕ್ತ ಸಹಾಯ ಮತ್ತು ಚಿಕಿತ್ಸೆ ನೀಡಬೇಕು. ಈ ಕುರಿತು ಕಾನೂನುಗಳು ಕೂಡ ರಚನೆಯಾಗಿವೆ ಎಂದರು. ವೇದಿಕೆಯಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಗಂಗಾಧರ ಎಸ್, ಸಹಾಯಕ ಸರಕಾರಿ ಅಭಿಯೋಜಕಿ ಶಿಲ್ಪಾ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೋಸ್ಟರ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವಿದ್ಯಾ ಎಂ ಸ್ವಾಗತಿಸಿದರು. ಶಾಂತಲಾ ನಾಯ್ಕ ವಂದಿಸಿದರು. ನಿಖಿತಾ ಎಫ್ ನಿರೂಪಿಸಿದರು. ಅರ್ಪಿತಾ ಸಂಗಡಿಗರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.