ರಸ್ತೆಯಲ್ಲಿ ಮೀನು ಮಾರಾಟ ನಿಲ್ಲಿಸುವಂತೆ ಮಹಿಳೆಯರಿಂದ ಮನವಿ


ಅಂಕೋಲಾ : ತಾಲೂಕಿನ ಬಳಲೆ-ಮಾದನಗೇರಿಯ ಕೆಲವು ಮೀನುಗಾರ ಮಹಿಳೆಯರು ರಸ್ತೆ ಪಕ್ಕದಲ್ಲಿ ಮೀನು ಮಾರಾಟ ಮಾಡುತ್ತಿದ್ದು, ಈ ರೀತಿ ಅವಕಾಶ ನೀಡಬಾರದೆಂದು ಸ್ಥಳೀಯ ಮೀನುಗಾರ ಮಹಿಳೆಯರು ಸೋಮವಾರ ಪಿಐ ಸಂತೋಷ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ತಿಳಿಸಿದಂತೆ ಬಳಲೆ-ಮಾದನಗೇರಿಯಲ್ಲಿ ಹಲವು ಕುಟುಂಬಗಳು ಮೀನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವೆ. ಅದು ನಮ್ಮ ಕುಲಕಸಬು ಆಗಿದ್ದು, ಈಗ ಬೇರೆ ಗ್ರಾಮದವರು ಮೀನು ಮಾರಾಟ ಮಾಡಲು ಬರುತ್ತಾರೆ. ಕೆಲ ಮಹಿಳೆಯರು ರಸ್ತೆಯ ಪಕ್ಕದಲ್ಲಿ ಮೀನು ಮಾರಾಟ ಮಾಡುತ್ತಾರೆ. ಇದರಿಂದ ಮೀನು ಮಾರುಕಟ್ಟೆಗೆ ಬರುವ ಗ್ರಾಹಕರು ಬಹಳ ಕಡಿಮೆಯಾಗಿದ್ದಾರೆ. ಮೀನು ಮಾರುಕಟ್ಟೆಗೆ ಬಂದು ಮೀನು ಮಾರಾಟ ಮಾಡಬೇಕು ಹೊರತು ಸಿಕ್ಕ ಸಿಕ್ಕಲ್ಲಿ ಮೀನು ಮಾರಾಟ ಮಾಡುವುದರಿಂದ ವಾತಾವರಣವೂ ಕಲುಷಿತ ಆಗಲಿದೆ.ರಸ್ತೆ ಪಕ್ಕದಲ್ಲಿ ವಾಹನ ಸವಾರರು ಮೀನು ತೆಗೆದುಕೊಳ್ಳಲು ನಿಲ್ಲುವುದರಿಂದ ಅಪಘಾತಗಳು ಆಗುವ ಸಂಭವ ಹೆಚ್ಚಿದ್ದು, ಇದಕ್ಕೆ ಅವಕಾಶ ನೀಡಬಾರದೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿಯನ್ನು ಸ್ವೀಕರಿಸಿದ ಪಿಐ ಸಂತೋಷ ಶೆಟ್ಟಿ ಮಾತನಾಡಿ, ಸಗಡಗೇರಿ ಮತ್ತು ತೊರ್ಕೆ ಗ್ರಾಪಂ. ವತಿಯಿಂದ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಿಸಿದೆ. ಅವರ ಪರವಾನಿಗೆ ಇಲ್ಲದೇ ಬೇಕಾಬಿಟ್ಟಿ ಮೀನು ಮಾರಾಟ ಮಾಡಿದ್ದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಬಳಲೆ ಮಾದನಗೇರಿಯ ಮೀನುಗಾರ ಮಹಿಳೆಯರು ಉಪಸ್ಥಿತರಿದ್ದರು.