ಅಂಕೋಲಾ : ಗಾಂಧಿವಾದ ಮತ್ತು ಮಾರ್ಕ್ಸನ ಸಮಾಜವಾದ ಎರಡೂ ಶ್ರೇಷ್ಠ ವಾದಗಳು ಆದರೆ ಅದರ ಹೆಸರಿನಲ್ಲಿ ಬೃಷ್ಠ ರಾಜಕಾರಣ ನಡೆಸುವದು ಸಮಾಜಕ್ಕೂ ದೇಶಕ್ಕೂ ಅತ್ಯಂತ ಅಪಾಯಕಾರಿ ಎಂದು ನಿವೃತ್ತ ಪ್ರಾಚಾರ್ಯ, ಬರಹಗಾರ, ಚಿಂತಕ ರಾಮಚಂದ್ರ ಹೆಗಡೆ ಹೇಳಿದರು. ಅವರು ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಆಶ್ರಯದಲ್ಲಿ ಪಟ್ಟಣದ ಪಿ ಎಂ ಜ್ಯೂನಿಯರ ಕಾಲೇಜಿನ ಗಂಗಾದೇವಿ ತೊರ್ಕೆ ಸಭಾಭವನದಲ್ಲಿ ಜರುಗಿದ ಶಂಕರ ಕೇಣಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಮಾಜವಾದ ಮತ್ತು ಗಾಂಧೀವಾದ ಎರಡು ಒಂದೇ ಆದರೂ ಮೂಲ ತತ್ವಗಳಲ್ಲಿ ವ್ಯತ್ಯಾಸವಿದೆ.
ಇಂದಿನ ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ಸಮಾಜವಾದದ ಹೆಸರಿನಲ್ಲಿ ಅಪಾರವಾದ ಹಣ ಸತ್ಕಾರ್ಯಕ್ಕೆ ಬಳಕೆಯಾಗದೆ ಪೋಲಾಗುತ್ತಿದೆ. ಶ್ರಮಿಕರು ಸಿಗುತ್ತಿಲ್ಲ, ಕೃಷಿ ಕ್ಷೇತ್ರ ನಾಶವಾಗುತ್ತಿದೆ. ಆರೋಗ್ಯ ಸೇವೆಗೆ, ಶಿಕ್ಷಣ ಸೇವೆಗೆ ಹಣ ಸಾಲುತ್ತಿಲ್ಲ. ಇವು ನಮ್ಮ ಮುಂದಿರುವ ಸವಾಲುಗಳು ಇವುಗಳನ್ನು ಮೀರಿ ನಾವು ಆಲೋಚಿಸಬೇಕಾಗಿದೆ ಎಂದರು.
ಪ್ರತಿಷ್ಠಾನದ ಮಹಾ ಪೋಷಕರಾದ ಕೇಶವ ಡಿ ಪೆಡ್ನೇಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದಿ. ಶಂಕರ ಕೇಣಿಯವರು ಅಪ್ಪಟ ಸಮಾಜವಾದಿಗಳೂ, ಬಡವರ ಕೂಲಿಕಾರರ, ಬಡವರ, ರೈತರ ಪರವಾಗಿ ಧ್ವನಿ ಎತ್ತಿ ಹೋರಾಟ ಮಾಡುತ್ತ ಬಂದವರಾಗಿದ್ದರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಮುಖಿ ಕೆಲಸ ಮಾಡುತ್ತಿದ್ದರು. ಶಿಸ್ತುಬದ್ಧ ವೃತ್ತಿ ಮತ್ತು ಶಿಸ್ತಿನಜೀವನ ನಡೆಸಿದ್ದರು ಅಂಥವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿರುವದು ಶ್ಲಾಘನೀಸ ಎಂದರು. ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಮೋಹನ ಹಬ್ಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿರಿಯ ಸಾಹಿತಿ ವಿಷ್ಣು ನಾಯ್ಕರ ನೇತೃತ್ವದಲ್ಲಿ ದಿನಕರ ಪ್ರತಿಷ್ಠಾನ ಉತ್ತಮ ಕಾರ್ಯ ನಿರ್ವಹಿಸುತ್ತ ಬಂದಿದೆ. ಡಾ.ದಿನಕರ ದೇಸಾಯರ ಕೃತಿಯನ್ನು ಉಲ್ಲೇಖಿಸಿ ಸಮಾಜವಾದದ ಪ್ರತಿಪಾದಕರಾದ ಶಂಕರ ಕೇಣಿಯವರು ನೆಲದ ಭಾಷೆಯಲ್ಲಿ ಸಂವೇದಿಸುವಂತ ಮಾನವತಾವಾದಿಗಳಾಗಿದ್ದರು ಎಂದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ, ಹಿರಿಯ ಸಾಹಿತಿ ವಿಷ್ಣು ನಾಯ್ಕ ಉಪಸ್ಥಿತರಿದ್ದರು.
ಸಿಂಪಗ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ ಉದಯ ನಾಯ್ಕ ಬೇಳಾ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಸಿಂಚನಾ ಸಂಜೀವ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ.ಆರ್ ಜಿ ಗುಂದಿ ಪ್ರಾಸ್ತಾವಿಕ ಮಾತನಾಡಿದರು, ಜಗದೀಶ ನಾಯಕ ಹೊಸ್ಕೇರಿ ವಂದಿಸಿದರು., ಡಾ. ಎಸ್ ವಿ ವಸ್ತ್ರದ ಕಾರ್ಯಕ್ರಮ ನಿರ್ವಹಿಸಿದರು. ಲಲಿತಾ ನಾಯ್ಕ ಸನ್ಮಾನ ಪತ್ರ ವಾಚಿಸಿದರು.
ಗೋಪಾಲಕೃಷ್ಣ ನಾಯಕ ಸ್ವಾಗತಿಸಿದರು.