ಹಳ್ಳದ ನೀರಿನ ಸೆಳೆತಕ್ಕೆ ಸಿಲುಕಿ ಯುವಕನೊಬ್ಬ ನಾಪತ್ತೆ

ಅಂಕೋಲಾ: ಹಳ್ಳದ ನೀರಿನ ಸೆಳೆತಕ್ಕೆ ಸಿಲುಕಿ ಯುವಕನೊಬ್ಬ ನಾಪತ್ತೆಯಾದ ಘಟನೆ ಭಾನುವಾರ ಸಂಜೆ ತಾಲ್ಲೂಕಿನ ಹೊಸಕಂಬಿ ಸೇತುವೆ ಸಮೀಪದಲ್ಲಿ ನಡೆದಿದೆ.
ಬೊಬ್ರವಾಡದ ಸುಹಾಸ ಕೃಷ್ಣ ನಾಯ್ಕ (28) ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾದವರು ಎನ್ನಲಾಗಿದೆ.
ರವಿವಾರ ಮುಂಜಾನೆ ತೆಂಕಣಕೇರಿ, ಬೊಬ್ರುವಾಡ ಮತ್ತು ಇತರೆ ಪ್ರದೇಶದ ಸ್ನೇಹಿತರ ತಂಡ ಹೊಸಕಂಬಿ ಸೇತುವೆ ಒಳಭಾಗದ ನದಿಯ ಅಂಚಿನ ಪ್ರದೇಶದಲ್ಲಿ ಪಾರ್ಟಿ ಮಾಡಲೆಂದು ತೆರಳಿದ್ದರು.
ಈ ವೇಳೆ ಕೆಲವು ಸ್ನೇಹಿತರು ನೀರಿಗೆ ಇಳಿದಿದ್ದರೂ ಎನ್ನಲಾಗಿದೆ. ನೀರಿನ ಹರಿವಿನ ಸೆಳೆತ ಜೋರಾಗಿದ್ದರಿಂದ ಸ್ನೇಹಿತರು ಈಜಿ ದಡ ಸೇರಿದ್ದರು. ಆದರೆ ನೋಡ ನೋಡುತ್ತಿದ್ದಂತೆಯೆ ಸುಹಾಸ್ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ.
ಸುಹಾಸನ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ನೇಹಿತರು ಶ್ರಮಿಸುತ್ತಿದ್ದಾರೆ. ಸಿಪಿಐ ಸಂತೋಷ್ ಶೆಟ್ಟಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದ್ದಾರೆ.