ನಾಳೆಯಿಂದ ದಾಂಡೇಲಿ‌ ನಗರದಲ್ಲಿ ಅದ್ದೂರಿಯಾಗಿ ನವರಾತ್ರಿ ಉತ್ಸವ ಆರಂಭ : ಮಾಜಿ ಶಾಸಕ ಸುನೀಲ್ ಹೆಗಡೆ

ದಾಂಡೇಲಿ : ದಾಂಡೇಲಿ‌‌ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ಎರಡನೇ ವರ್ಷದ ನವರಾತ್ರಿ ಉತ್ಸವವು ನಾಳೆಯಿಂದ ಅದ್ದೂರಿಯಾಗಿ ನಗರದ ಹಳೆ ನಗರ ಸಭಾ ಮೈದಾನದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸುನೀಲ್ ಹೆಗಡೆಯವರು ಹೇಳಿದರು.

ಅವರು ಇಂದು ಶನಿವಾರ ಹಳೆ ನಗರ ಸಭಾ ಮೈದಾನದಲ್ಲಿ ಉತ್ಸವದ ಸಿದ್ಧತೆ ಹಾಗೂ ಕಾರ್ಯಕ್ರಮದ ಕುರಿತಂತೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ನೇತೃತ್ವದಲ್ಲಿ ಈ‌ ವರ್ಷ ಎರಡನೇ ವರ್ಷದ ನವರಾತ್ರಿ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಶ್ರೀ.ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ನಿರಂತರ ಒಂಬತ್ತು ದಿನಗಳವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಾಧಿಸಿ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಎಸ್.ಬಾಲಮಣಿಯವರು ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಮಹತ್ವದ ಸಂಕಲ್ಪದಡಿ ಈ ಕಾರ್ಯಕ್ರಮವನ್ನು ಸರ್ವರ ಸಹಕಾರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾದ ಎಸ್.ಪ್ರಕಾಶ್ ಶೆಟ್ಟಿಯವರು ನಾಳೆಯಿಂದ ಅ:23ರವರೆಗೆ ಹಮ್ಮಿಕೊಳ್ಳಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ‌ ಬಗ್ಗೆ ವಿವರಣೆಯನ್ನು‌ ನೀಡಿ, ಸ್ಥಳೀಯ ಕಲಾವಿದರುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಸಮಿತಿ ಪ್ರಮುಖರುಗಳಾದ ಗುರು ಮಠಪತಿಯವರು ದಾಂಡೀಯಾ ಕಾರ್ಯಕ್ರಮದ ಬಗ್ಗೆ, ಶಾರದಾ ಪರಶುರಾಮ‌ ಅವರು ಮಹಿಳೆಯರಿಗಾಗಿ ಆಯೋಜಿಸಲಾದ ಕಾರ್ಯಕ್ರಮಗಳ‌ ಬಗ್ಗೆ, ನರೇಂದ್ರ ಚೌವ್ಹಾಣ್ ಅವರು ವಿವಿಧ ಮಳಿಗೆಗಳ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.

ಕೊನೆಯಲ್ಲಿ ಸಮಿತಿಯ ಖಜಾಂಚಿ ಅಶುತೋಷ್ ಕುಮಾರ್ ರಾಯ್ ಅವರು ‌‌ನವರಾತ್ರಿ ಉತ್ಸವ ಇದು ದಾಂಡೇಲಿ ಉತ್ಸವವನ್ನಾಗಿಸುವ‌ ನಿಟ್ಟಿನಲ್ಲಿ ಸರ್ವರು ಸಹಕಾರ‌ ನೀಡಬೇಕೆಂದು ಮನವಿ‌ ಮಾಡಿದರು.

ಈ ಸಂದರ್ಭದಲ್ಲಿ‌ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ತಿತರಿದ್ದರು.