ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ವೈದ್ಯರಿಗೆ ಸೂಚಿಸಿದ ಶಾಸಕ ಭೀಮಣ್ಣ ನಾಯ್ಕ

ಸಿದ್ದಾಪುರ: ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರು ಹಾಗೂ ಸಿಬ್ಬಂದಿಗಳು ಸಕಾರಾತ್ಮಕವಾಗಿ ಸ್ಪಂದಿಸುವಂತೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.
ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಶುಕ್ರವಾರ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಮಾತನಾಡಿ, ವೈದ್ಯರ ಸೇವೆ ತುಂಬಾ ಅಮೂಲ್ಯವಾಗಿದೆ. ಕರ್ತವ್ಯದ ವೇಳೆ ಮಾನವೀಯತೆಯಿಂದ ಕೆಲಸ ಮಾಡಿ ರೋಗಿಗಳ ವಿಶ್ವಾಸ ಗಳಿಸಿ. ಆಸ್ಪತ್ರೆಯ ಕೆಲ ವೈದ್ಯರಿಂದ ರೋಗಿಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪವಿದೆ. ಒಳ್ಳೆಯ ಚಿಕಿತ್ಸೆ ಸಿಗಬೇಕೆಂಬ ನಿರೀಕ್ಷೆ ಜನರಲ್ಲಿದೆ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಿ ಎಂದ ಅವರು, ಜನ ಸಹ ವೈದ್ಯರಿಗೆ ಸಹ ಸಹಕಾರ ನೀಡಬೇಕು. ವೈದ್ಯರ ಕೊರತೆ ಸಹ ತುಂಬಾ ಇದೆ. ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಆಗಾಗ ಆಸ್ಪತ್ರೆಗೆ ಭೇಟಿ ನೀಡಿ ಸ್ಥಿತಿ-ಗತಿ ಪರಿಶೀಲಿಸಬೇಕು ಎಂದರು.
ಸರ್ಕಾರಿ ಆಸ್ಪತ್ರೆಯ ರೋಗಿಗಳ ಊಟಕ್ಕೆ ಸದ್ಯ ನೀಡುತ್ತಿರುವ ರೇಟ್ ತೀರಾ ಕಡಿಮೆಯಾಗಿದೆ. ಪರಿಷ್ಕೃತ ದರ ನೀಡಬೇಕು. ಸಿದ್ದಾಪುರದಲ್ಲಿ ಸ್ಕ್ಯಾನಿಂಗ್ ಇಲ್ಲದೇ ಸಾಗರ ಅಥವಾ ಶಿರಸಿಗೆ ಹೋಗುತ್ತಿದ್ದಾರೆ. ಕೆಲ ವೈದ್ಯರು ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ರೋಗಿಗಳು ಗಂಟೆಗಟ್ಟಲೆ ಕಾದು ಸುಸ್ತಾಗುತ್ತಿದ್ದಾರೆ ಎಂಬಿತ್ಯಾದಿ ಅಭಿಪ್ರಾಯ ಸಮಿತಿ ಸದಸ್ಯರುಗಳಿಂದ ಕೇಳಿ ಬಂದವು.
ಈ ವೇಳೆ ಆಸ್ಪತ್ರೆ ಆಡಳಿತಾಧಿಕಾರಿ ಪ್ರಕಾಶ ಪುರಾಣಿಕ, ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ವೈದ್ಯ ಲೊಕೇಶ ವಾಯ್.ಆರ್., ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುಮಂಗಲಾ ನಾಯ್ಕ, ಜಿ.ಟಿ.ನಾಯ್ಕ ಗೋಳಗೋಡ, ಬಾಲಕೃಷ್ಣ ನಾಯ್ಕ, ಮಂಜು ಹಸ್ಲರ್, ಜನಾರ್ಧನ್ ನಾಯ್ಕ, ಸುರೇಖಾ ಶ್ರೀನಿವಾಸ ನಾಯ್ಕ, ಚಂದ್ರಶೇಖರ ಗೌಡ ಉಪಸ್ಥಿತರಿದ್ದರು.