ನೀರನ್ನು ಮಿತವಾಗಿ ಬಳಸುವಂತೆ ಕರೆ ನೀಡಿದ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ

ಸಿದ್ದಾಪುರ: ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಹೆಚ್ಚಾಗಿದ್ದು, ತಾಲೂಕಿನ ಪ್ರತಿ ಪಂಚಾಯ್ತಿ ವ್ಯಾಪ್ತಿಯ ಜನ ನೀರನ್ನು ಮಿತವಾಗಿ ಬಳಸುವಂತೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.
ತಾಲೂಕಿನ ಬಿದ್ರಕಾನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಸಲಿಗೆಯಲ್ಲಿ ನಿರ್ಮಿಸಲಾದ ನೂತನ ಬಸ್ ತಂಗುದಾಣ ಉದ್ಘಾಟಿಸಿ ಪಂಚಾಯ್ತಿ ಕಚೇರಿಗೆ ಆಗಮಿಸಿ ಮಾತನಾಡಿ, ಈ ಬಾರಿ ಮಳೆಯ ಕೊರತೆಯಿಂದ ಭೂಮಿಯಲ್ಲಿನ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ನೀರಿನ ಮೂಲಗಳು ಸಹ ಭರ್ತಿಯಾಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ನಿಚ್ಚಳಲಾಗಿದ್ದು, ಜನ ನೀರನ್ನು ಮಿತವಾಗಿ ಬಳಸಬೇಕು ಎಂದರು.
ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಜನರು ಆಯ್ಕೆ ಮಾಡಿದರೆ ಜನಪ್ರತಿನಿಧಿಯಾದವನು ಸ್ವಾರ್ಥ ಸಾಧಿಸಿದರೆ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ. ಜನರ‌ ಕೆಲಸವನ್ನು ಆದ್ಯತೆಯ ಮೇರೆಗೆ ಹಂತ ಹಂತವಾಗಿ ಮಾಡಲಾಗುವುದು ಎಂದರು.


ಈ ವೇಳೆ ಬಿದ್ರಕಾನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ಯಾಮಲಾ ಗೌಡ, ಉಪಾಧ್ಯಕ್ಷ ಬಾಬು ನಾಯ್ಕ, ಸದಸ್ಯರಾದ ಮಧು ಭಟ್, ಜಯಂತ ಹೆಗಡೆ, ಮಮತಾ ಚೆನ್ನಯ್ಯ, ಸರೋಜಾ ನಾಯ್ಕ, ಸಾವಿತ್ರಿ ಗೌಡ ಉಪಸ್ಥಿತರಿದ್ದರು. ಪಿಡಿಓ ಸಹನಾ ಸ್ವಾಗತಿಸಿದರು.