ಜನರ ಕೆಲಸ ಮಾಡದ ಅಧಿಕಾರಿಗಳು ಈ ಜಿಲ್ಲೆಯಲ್ಲಿ ಇರಲು ಅರ್ಹರಲ್ಲ. ಮಂಕಾಳ ವೈದ್ಯ.

ಅಂಕೋಲಾ : ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ, ಜನರ ಕೆಲಸ ಮಾಡದ ಅಧಿಕಾರಿಗಳು ಈ ಜಿಲ್ಲೆಯಲ್ಲಿ ಇರಲು ಅರ್ಹರಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ
ಮಂಕಾಳ ಎಸ್ ವೈದ್ಯ ಹೇಳಿದರು. ಅವರು ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ಆವರಣದಲ್ಲಿ ನಡೆದ ಅಂಕೋಲಾ ತಾಲೂಕು ಮಟ್ಟದ ಜನಸ್ಪಂದನಾ ಹಾಗೂ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಅಧಿಕಾರಿಗಳು ಜನರಿಗಾಗಿ ಕೆಲಸ ಮಾಡಿ, ಕೆಲಸ‌ ಮಾಡುವ‌ ಮನಸ್ಸಿದ್ದರೆ ನಮ್ಮ ಜಿಲ್ಲೆಗೆ ಬನ್ನಿ. ಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು, ಸರಕಾರದ ಪ್ರತಿನಿಧಿಗಳು ಜನರಿಗಾಗಿಯೇ ಕೆಲಸ ಮಾಡದಿದ್ದರೆ ಹೇಗೆ, ಅದಕ್ಕೆ ನಾನು ಅವಕಾಶ ಕೊಡಲ್ಲ ಎಂದು ಖಾರವಾಗಿಯೇ ನುಡಿದರು. ಭಾವಿಕೇರಿ ಗ್ರಾ.ಪಂ. ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಆಲಿಸಿದ ಅವರು ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳು ತ್ವರಿತವಾಗಿ ಬಗೆಹರಿಸಬೇಕು. ಅಷ್ಟಕ್ಕೆ ಬಿಡುವಂತಿಲ್ಲ ನಾನು ಮತ್ತೆ ಸಮಸ್ಯೆ ಇರುವ ಕ್ಷೇತ್ರಕ್ಕೇ ಭೇಟಿನೀಡಿ ಕೆಲಸ ಆಗದಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಜಮೀನಿನ ಇ ಸ್ವತ್ತು ಕುರಿತಂತೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಎರಡು ಬಗೆಯ ಕಾನೂನು ಇದೆಯಾ ಎಂದು ಆಶ್ಚರ್ಯವಾಗುತ್ತದೆ ಯಾಕೆಂದರೆ ಉಡುಪಿ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು ಹೈದರಾಬಾದ ಕರ್ನಾಟಕ ನಿಯಮದಲ್ಲಿ ಇ ಸ್ವತ್ತು ಮಾಡಿದರೆ ಉತ್ತರ ಕನ್ನಡದಲ್ಲಿ ಮುಂಬಯಿ ಕರ್ನಾಟಕ ಅ್ಯಕ್ಟ್ ರೀತಿಯಲ್ಲಿ ಇ ಸ್ವತ್ತು ಮಾಡಿಕೊಡಬೇಕಾಗುತ್ತದೆ. ಇದನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಸರಳೀಕರಿಸಲು ಪ್ರಯತ್ನಿಸುತ್ತೇನೆ ಎಂದರು.

ಉದ್ಯೋಗದ ಭರವಸೆ ನೀಡಿದ ಜಿಲ್ಲಾಧಿಕಾರಿ.
ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಗ್ರಾಮದ ತೀರಬಡ ಕುಟುಂಬದ ಇಬ್ಬರು ಯುವತಿಯರಿಗೆ ಯಾವುದೇ ಇಲಾಖೆಯಲ್ಲಿ ತಕ್ಷಣ ಅವರ ವಿದ್ಯಾಭ್ಯಾಸಕ್ಕನುಗುಣವಾಗಿ ಲಬ್ಯವಿರುವ ಹೊರಗುತ್ತಿಗೆ ಆಧಾರದ ನೌಕರಿ ಕೊಡಿಸುವ ಭರವಸೆ ನೀಡಿದರು. ಖಾಯಂ ಲಾಗಣಿ ಕುರಿತಂತೆ ಜಿಲ್ಲೆಯಲ್ಲಿ 60 ಸಾವಿರ ಪ್ರಕರಣಗಳು ಬಾಕಿ ಇದ್ದು
ಅರಣ್ಯ ಇಲಾಖೆಯ ಜೊತೆ ಸಭೆ ನಡೆಸಿ ಮೂರು ತಿಂಗಳಲ್ಲಿ ಹಂತ‌ಹಂತವಾಗಿ ಬಗೆಹರಿಸುತ್ತೇವೆ.
ಸಾರ್ವಜನಿಕರಿಗೆ ರಸ್ತೆ ಕೇಳಲು ಅಧಿಕಾರ ಇದೆ. ಅಂತಹ ಪ್ರದೇಶದಲ್ಲಿ ಸರ್ವೆ ನಡೆಸಿ ಹಳೆಯ ದಾಖಲೆಗಳನ್ನು ಪರಿಶೀಲಿಸಿ ತಹಶೀಲ್ದಾರ ಮೂಲಕ ಅಥವಾ ಏಸಿ ಮೂಲಕ ಮಾಡಲಿಕ್ಕೆ ಅವಕಾಶ ಇದೆ ಎಂದರು. ಆದಾಯ ಮಿತಿಯೊಳಗೆ ಇರುವವರ ಅರ್ಜಿಗಳನ್ನು ಪರಿಶೀಲಿಸಿ ಪಿಂಚಣಿ ಮಂಜೂರು ಮಾಡುವ ಕ್ರಮ ವಹಿಸಿದ್ದೇವೆ. ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ 72000 ಅರ್ಜಿ ಬಂದಿವೆ. ಈಗಾಗಲೇ ಅರ್ಜಿ ಹಾಕಿದವರಿಗೆ ರೇಶನ್‌ಕಾರ್ಡ ಕೊಡುವ ವ್ಯವಸ್ಥೆಯೂ ಚಾಲ್ತಿಯಲ್ಲಿದೆ ಎಂದರು.
ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ಕೆ ಸೈಲ್ ಮಾತನಾಡಿ ಉಸ್ತುವಾರಿ ಸಚಿವರು ಜನರ ಬಗ್ಗೆ ವಿಶೇಷ ಕಾಳಜಿ ವಹಿಸಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ ಜೊತೆಗೆ ಜನರ ಪರವಾಗಿ ಕೆಲಸ ಮಾಡುತ್ತಿರುವ ಧೀಮಂತ ಮಹಿಳೆ ಜಿಲ್ಲಾಧಿಕಾರಿಗಳು ಇದ್ದಾರೆ. ಇವರ ಈ ಕಾರ್ಯವನ್ನು ಮತ್ತೆ ಮುಂದುವರೆಸಿ ತಾಲೂಕಿನಲ್ಲಿ ಪ್ರತೀ ಮಂಗಳವಾರ ಒಂದೊಂದು ಪಂಚಾಯತಗಳಿಗೆ ಭೇಟಿ‌ ನೀಡಿ ಜನರ ಸಮಸ್ಯೆ ಆಲಿಸಿ ಬಗೆಹರಿಸಲು ಕ್ರಮ ವಹಿಸುತ್ತೇನೆ ಎಂದರು.
ಅಂಕೋಲಾ ಪುರಸಭೆಯ ಮೀನು ಮಾರುಕಟ್ಟೆಯಲ್ಲಿ ಪುರಸಭೆಯ ಗುತ್ತಿಗೆದಾರರಿಂದ ಕರ ವಸೂಲಿಯಲ್ಲಿ ಸುಲಿಗೆ ನಡೆಯುತ್ತಿದೆ ಎನ್ನುವ ಮೀನುಗಾರರ ಆರೋಪಕ್ಕೆ ಉತ್ತರಿಸಿದ ಶಾಸಕರು ಇನ್ನು‌ಮುಂದೆ ಮೀನು‌ಮಾರುಕಟ್ಟೆಯ ನಿರ್ವಹಣೆ ಮತ್ತು ಕರವಸೂಲಿಯನ್ನು ಮೀನುಗಾರರ ಫೆಡರೇಶನ್ನಿಗೆ ವಹಿಸಲಾಗುವದು ಎಂದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ನೇರವಾಗಿ ಹೇಳಿಕೊಂಡರು. ಭಾವಿಕೇರಿ ಗ್ರಾ.ಪಂ. ಉಪಾಧ್ಯಕ್ಷ ಉದಯ ವಾಮನ ನಾಯಕ ಮಾತನಾಡಿ ಭಾವಿಕೇರಿ ಅತೀದೊಡ್ಡ ಪಂಚಾಯತ ಆಗಿದ್ದು ಅನುದಾನ ಸಾಕಾಗುತ್ತಿಲ್ಲ ಅದಕ್ಕಾಗಿ ಇದನ್ನು ಎರಡು ಪಂಚಾಯತಾಗಿ ವಿಂಗಡಿಸಬೇಕು ಎಂದರು ಹಾಗೂ ನೌಕಾನೆಲೆಗೆ ಸ್ವಾಧಿನಪಡಿಸಿದ ಜಮೀನಿನಲ್ಲಿ ಗಿಡಗಳಿಗಷ್ಟೇ ಪರಿಹಾರ ನೀಡಿ ಭೂಮಿಗೆ ಪರಿಹಾರ ಇದುವರೆಗೂ ನೀಡಿಲ್ಲ ಎಂದರು. ಅಲಗೇರಿಯ ಸುರೇಶ ಆರ್ ನಾಯಕ ಬೆರಡೆ ಗ್ರಾಮದಲ್ಲಿರುವ ಕೃಷಿ ಜಮೀನುಗಳಿಗೆ ತೆರಳಲು ಸೀಬರ್ಡ್ ವ್ಯಾಪ್ತಿಯಲ್ಲಿ ಪರ್ಯಾಯ ರಸ್ತೆ ಕಲ್ಪಿಸಿ ಎಂದರು. ಸಂಜೀವಿನಿ ಸ್ವ ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷೆ ಬೀರಮ್ಮ ನಾಯಕ ಗೃಹಲಕ್ಷ್ಮೀ ಯೋಜನೆಯ ಹಣ ಮತ್ತು ಆಹಾರ ಪಡಿತರದ ಹಣ ಕೆಲವರಿಗೆ ಇದುವರೆಗೂ ಬಾರದಿರುವದನ್ನು ಸಚಿವರ ಗಮನಕ್ಕೆ ತಂದರು. ಸಂಜೀವ ಕುಚಿನಾಡ ಬೇಲೆಕೇರಿಯ ಸಾರ್ವಜನಿಕ ರುದ್ರಭೂಮಿಯ ಮಂಜೂರಿಗಾಗಿ ಆಗ್ರಹಿಸಿದರು. ಭಾವಿಕೇರಿಯ ಹೊನ್ನಪ್ಪ ನಾಯ್ಕ ಮನೆರಹಿತ ಸೈಟ್ ರಹಿತ ಜನರಿಗೆ ನಿವೇಶನ ಯೋಜನೆಯ ಲಿಸ್ಟನಲ್ಲಿರುವವರಿಗೆ ನಿವೇಶನ ಕಲ್ಪಸುವಂತೆ ಮನವಿ ಮಾಡಿಕೊಂಡರು. ಹರಿಕಂತ್ರ ಕೇಣಿ ಭಾಗದ ನಿವಾಸಿಗಳು ರಸ್ತೆಗಾಗಿ ಮನವಿ ಸಲ್ಲಿಸಿದರು.
ಪದ್ಮಶ್ರೀ ಸುಕ್ರೀ ಗೌಡರು ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲು ಸ್ವತಃ ಸಭೆಗೆ ಆಗಮಿಸಿದ್ದರು. ಈ ವೇಳೆ ಸ್ವತಃ ಸಚಿವರೇ ಸುಕ್ರೀ ಗೌಡರು ಕುಳಿತಲ್ಲಿಗೇ ತೆರಳಿ ಅವರ ಆರೋಗ್ಯ ವಿಚಾರಿಸಿ ಅಮರ ಮನೆಯ ಮೇಲ್ಮಹಡಿಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರದ ಕುರಿತು ಇದ್ದ ಸಮಸ್ಯೆಯನ್ನು ಆಲಿಸಿದರು ಮತ್ತು ಜಿಲ್ಲಾಧಿಕಾರಿಗಳ ಮೂಲಕ ಬಗೆಹರಿಸುವ ಭರವಸೆ ನೀಡಿದರಲ್ಲದೆ ಸುಕ್ರೀ ಗೌಡರ ಮೊಮ್ಮಗಳಿಗೆ ತಕ್ಷಣ ಉದ್ಯೋಗ ನೀಡುವ ಭರವಸೆ ನೀಡಿದರು.
ಇದೇ ವೇಳೆ ಭಾವಿಕೇರಿ ಗ್ರಾ.ಪಂ. ಮತ್ತು ಊರ ನಾಗರಿಕರ ವತಿಯಿಂದ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಹಾಗೂ ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕುಮಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ ಎಂ ಕಾಂಬ್ಳೆ, ಭಾವಿಕೇರಿ ಗ್ರಾ. ಪಂ. ಅಧ್ಯಕ್ಷೆ ದೀಪಾ ಶಿವಾ ನಾಯಕ, ಅರಣ್ಯ ಇಲಾಖೆಯ ಅಧಿಕಾರಿ ಅಭಿಷೇಕ್ ಎ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪುರಸಭೆ ಸದಸ್ಯರು ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಶಿರಸ್ತೆದಾರ ನಾಗರಾಜ್ ಸ್ವಾಗತಿಸಿದರು. ಸಹನಾ ನಾಯಕ ಪ್ರಾರ್ಥಿಸಿದರು. ಬಾಲಚಂದ್ರ ನಾಯಕ ಕಾರ್ಯಕ್ರಮ ನಿರ್ವಹಿಸಿದರು.

ಬಾಕ್ಸ
ಮೀನುಗಾರರಿಗೆ ಮನೆ ಮಂಜೂರಿ ಮಾಡಲು ಆರಟಿಸಿ ಅಗತ್ಯವಿಲ್ಲ ಹಳೆಯ ಮನೆ ಇದ್ದರೆ ಸಾಕು. ಯಾವುದೇ ಕಾರಣಕ್ಕೂ ಅವರಿಗೆ ತೊಂದರೆ ಕೊಡಬೇಡಿ. ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳೇನಾದರೂ ಇದ್ದರೆ ಅವುಗಳನ್ನು ಬಗೆಹರಿಸಿ ಅನುಕೂಲ ಮಾಡಿಕೊಡಿ.ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಆಶ್ರಯ ಮನೆಗಳನ್ನು ಕೊಟ್ಟಿದ್ದೇವೆ ಆದರೆ ನಂತರ ಬಂದ ಬಿಜೆಪಿ ಸರಕಾರ ಮನೆಯನ್ನೇ ಕೊಟ್ಟಿಲ್ಲ ಈಗ ಮತ್ತೆ ನಾವೇ ಮನೆಗಳನ್ನು ಕೊಡ್ತಿದ್ದೇವೆ. ಅಂಕೋಲಾ ತಾಲೂಕಾಸ್ಪತ್ರೆಗೆ ಸ್ತ್ರೀರೋಗ ತಜ್ಞರ ಅವಶ್ಯಕತೆ ಇದೆ. ಸೂಕ್ತ ಸಂಬಳ ನೀಡಿ ನೇಮಕ ಮಾಡಲು ಸಿದ್ಧರಿದ್ದೇವೆ. ಆದರೆ ಯಾವ ವೈದ್ಯರೂ ಬರುತ್ತಿಲ್ಲ. ಸದ್ಯ ನಿವೃತ್ತ ವೈದ್ಯರನ್ನಾದರೂ ನೇಮಕ ಮಾಡುತ್ತೇವೆ.
ಮಂಕಾಳ ವೈದ್ಯ. ಸಚಿವರು.