ಸಾಲ್ಕೋಡ್‌ ಗ್ರಾಮದ ಗೋಡಾಮಕ್ಕಿಯ ತೋಟದಲ್ಲಿ ಕಾಡು ಹಂದಿ ಕಾಟ. ನೂರಾರು ಅಡಿಕೆ ಸಸಿಗಳು ಹಾನಿ.


ಹೊನ್ನಾವರ :- ತಾಲೂಕಿನ ಸಾಲ್ಕೋಡ್ ಗ್ರಾಮದ ಗೋಡಾಮಕ್ಕಿಯಲ್ಲಿ ಕಾಡುಪ್ರಾಣಿಗಳ ಉಪಟಳ ಮೀತಿ ಮೀರಿದ್ದು ವಿನಾಯಕ ಸುಬ್ರಹ್ಮಣ್ಯ ಭಟ್ ಎನ್ನುವವರ ತೋಟದಲ್ಲಿಯ ನೂರಾರು ಅಡಿಕೆ ಸಸಿಗಳು ಹಂದಿ ಕಾಟದಿಂದ ಹಾನಿಯಾಗಿದೆ. ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸುವ ಕಾಡುಹಂದಿ ರೈತರು ಬೆಳೆಸಿದ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ಮುರಿದು ಹಾಕುದರಿಂದ ಸಂಕಷ್ಠ ಅನುಭವಿಸುವಂತಾಗಿದೆ.

ಇತ್ತೀಚೀನ ದಿನದಲ್ಲಿ ಕೊಳೆರೋಗದಿಂದ ಅಡಿಕೆ ಬೆಳೆ ನಷ್ಟ ಒಂದೆಡೆಯಾದರೆ, ಇನ್ನೊಂದೆಡೆ ಮಿಶ್ರ ಬೆಳೆಗಳಾದ ಬಾಳೆ, ಕಾಳುಮೆಣಸು, ತೆಂಗು, ತರಕಾರಿಗಳು ಕಾಡು ಪ್ರಾಣಿಗಳ ದಾಳಿಯಿಂದಾಗಿ ನಾಶವಾಗುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಭಾರೀ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಬಂದಿರುವುದರಿಂದ ಶೇ. 50ಕ್ಕೂ ಹೆಚ್ಚು ಪ್ರಮಾಣದ ಬೆಳೆ ನಾಶವಾಗಲಿದೆ. ಈ ಬಾರಿ ಸಕಾಲಕ್ಕೆ ಮಳೆ ಬರದೇ ಬೇಸಿಗೆಯಲ್ಲಿ ಅಡಿಕೆ ಚಂಡೆ ಒಣಗಿದರೆ ಜುಲೈ ತಿಂಗಳಿನಲ್ಲಿ ಒಮ್ಮೆಲೇ ಸುರಿದ ಮಳೆಯಿಂದ ಕೊಳೆ ರೋಗ ಕಾಡಿತ್ತು. ಬಿಸಿಲಿನ ವಾತಾವರಣದಲ್ಲಿ ಕೋತಿಗಳು ತೆಂಗು ಕೃಷಿಯ ಕಡೆಗೆ ಲಗ್ಗೆಯಿಟ್ಟರೆ, ಕಾಡು ಹಂದಿಗಳು ತೋಟಕ್ಕೆ ನುಗ್ಗಿ ಅಡಿಕೆ ಗಿಡಗಳನ್ನು ನಾಶಪಡಿಸುತ್ತಿವೆ.


ಕೋತಿಗಳು ಒಮ್ಮೆ ತೋಟಕ್ಕೆ ದಾಳಿ ಮಾಡಿದರೆ ಎಳನೀರು ಹಾಗೂ ತೆಂಗಿನಕಾಯಿಗಳನ್ನು ಎಳೆದು ಕೆಡವುತ್ತವೆ. ಮಳೆಗಾಲದಲ್ಲಿ ನೆಟ್ಟು ಬೆಳೆಸಿದ ಅಡಿಕೆ, ಬಾಳೆ ಗಿಡಗಳು ಹಾಗೂ ಕಾಳು ಮೆಣಸಿನ ಬಳ್ಳಿಗಳು ಕಾಡು ಹಂದಿಗಳ ಪಾಲಾಗುತ್ತಿವೆ.ವರ್ಷದಿಂದ ವರ್ಷಕ್ಕೆ ಕೂಲಿ ವೆಚ್ಚ, ಹಾಗೂ ಇತರೆ ಖರ್ಚು ಹೆಚ್ಚಳವಾಗುತ್ತಿರುದರಿಂದ ಸಾಂಪ್ರದಾಯಿಕವಾಗಿ ನಡೆಸುತ್ತಾ ಬಂದಿದ್ದ ತೋಟಗಾರಿಕೆ ಪದ್ದತಿಯನ್ನು ಅನುಸರಿಸದೇ ಆಧುನಿಕ ಪದ್ದತಿಗೆ ಹೊಂದಿಕೊಳ್ಳುದರಿಂದ ಇಳುವರಿ ಕಡಿಮೆಯಾಗುತ್ತಿದೆ.

ಮಂಗನನ್ನು ಓಡಿಸಲು ಹಲವು ಬಗೆಯ ವಸ್ತುಗಳನ್ನು ಕಂಡುಹಿಡಿದರೂ ರಾತ್ರಿ ಹೊತ್ತು ನುಗ್ಗುವ ಕಾಡುಹಂದಿಯನ್ನು ನಿಯಂತ್ರಿಸಲು ಸಾದ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ಪ್ರತಿ ಮನೆಯಲ್ಲಿಯೂ ನಾಯಿ ಇರುತ್ತಿತ್ತು. ಇಂದು ಚಿರತೆ ಮನೆಯಂಗಳಕ್ಕೆ ಬಂದು ನಾಯಿಯನ್ನು ಬೇಟೆಯಾಡುವುದರಿಂದ, ನಾಯಿ ಸಾಕಲು ಬೇಜಾರಾಗುತ್ತದೆ ಎನ್ನುತ್ತಾರೆ ಕೃಷಿಕರು. ತೋಟ ಹಾನಿಯಾದವರ ಮನೆಯಲ್ಲಿಯೇ ಕಳೆದ ಮೂರು ವರ್ಷದಿಂದ ನಾಲ್ಕು ನಾಯಿಗಳು ಚಿರತೆಯ ಪಾಲಾಗಿವೆ.

ಕಷ್ಟಪಟ್ಟು ನೆಟ್ಟ ಅಡಿಕೆ ಸಸಿ ಈ ರೀತಿಯಾಗಿದೆ. ಇನ್ನು ಒಂದು ವರ್ಷ ಅಡಿಕೆ ಗಿಡ ನೆಡಲು ಆಗುದಿಲ್ಲ ಹೀಗೆ ಆದರೆ ಭವಿಷ್ಯದಲ್ಲಿ ಹೊಸ ಅಡಿಕೆ ಮರ ಬೆಳೆಸಲು ಸಾಧ್ಯವೆ ಇಲ್ಲ ಎಂದು ಕೃಷಿಕರು ತಮ್ಮ ಅಳಲನ್ನು ತೊಡಿಕೊಂಡರು. ಇನ್ನಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡು ರೈತರು ಬೆಳೆದ ಬೆಳೆಗೆ ಆದ ಹಾನಿಗೆ ಪರಿಹಾರ ಒದಗಿಸಿಕೊಡುತ್ತಾರಾ ಕಾದು ನೋಡಬೇಕಿದೆ.