ಹೊನ್ನಾವರ :- ನಾಮಧಾರಿ ವಿದ್ಯಾರ್ಥಿ ಸಭಾಭವನದಲ್ಲಿ ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘ ಮತ್ತು ಎಸ್. ಬಂಗಾರಪ್ಪ ಪ್ರತಿಷ್ಟಾನ ಜಂಟಿಯಾಗಿ ಏರ್ಪಡಿಸಿದ ಎಸ್ ಬಂಗಾರಪ್ಪನವರ 92 ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ವಿಧಾನ ಸಭಾ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಉದ್ಘಾಟನೆ ಮಾಡಿದ್ರು..ನಂತರ ಮಾತನಾಡಿದ ಅವರು, ವಯಸ್ಸಿನಲ್ಲಿ ತನಗಿಂತ ತುಸು ಕಡಿಮೆ ವಯಸ್ಸಿನವರಾದ ಬಂಗಾರಪ್ಪನವರನ್ನು ರಾಜಕಾರಣಕ್ಕೆ ನಾನೇ ಕರೆ ತಂದಿದ್ದೆ ಎತ್ತರಕ್ಕೆ ಬೆಳೆದು ಜನ ಪರ, ಶೋಷಿತರ ಪರ , ಹಿಂದುಳಿದವರ ಪರ, ರೈತರ ಪರ ಹೋರಾಟಗಳನ್ನು ನಡೆಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದರು.ಬಡವರು ಹಾಗೂ ನೊಂದವರಿಗೆ ನ್ಯಾಯ ಕೊಡಿಸುವ ತುಡಿತ ಹೊಂದಿರುವ ಅಪರೂಪದ ರಾಜಕಾರಣಿಯಾಗಿದ್ದರು. ರಾಜಕಾರಣದ ಮೂಲಕ ಅಧಿಕಾರ ಹಿಡಿಯುವುದು ಮುಖ್ಯವಲ್ಲ. ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ನ್ಯಾಯದ ಮೂಲಕ ಜನಾನುರಾಗಿಯಾಗಿರುವುದು ಮುಖ್ಯ. ಅಂತಹ ಮುತ್ಸದ್ದಿ ರಾಜಕಾರಣಿ ಬಂಗಾರಪ್ಪನವರು ಎಂದರೆ ತಪ್ಪಾಗಲಾರದು. ಸೂಕ್ಷ್ಮಾತಿ ಸೂಕ್ಷ್ಮ ಸಮುದಾಯಗಳ ಜನರ ಧ್ವನಿಗೆ ನ್ಯಾಯ ನೀಡಲು ಜೀವನ ಪರ್ಯಂತ ಹೋರಾಡಿದ ಧೀಮಂತ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಎಂದು ಹೇಳಿದ್ರು..
ಬಳಿಕ ಶಾಸಕ ಅರ್.ವಿ.ದೇಶಪಾಂಡೆ ಮಾತನಾಡಿ, ಅಧಿಕಾರಕ್ಕೆ ಕುರ್ಚಿಗೆ ಅಂಟಿ ಕುಳಿತುಕೊಳ್ಳದೇ ಜನಸಾಮನ್ಯರ ಧ್ವನಿಯಾಗಿ ಆಡಳಿತ ನಡೆಸಿದ ಹಿರಿಮೆ ಬಂಗಾರಪ್ಪನವರಿಗೆ ಸಲ್ಲುತ್ತದೆ.ಜನರ ಹೃದಯ ಅರಿತು ಕೆಲಸ ಮಾಡಿದವರು. ಆದ್ದರಿಂದ ಅವರ ವಿಶ್ವ ಆರಾಧನಾ, ಆಶ್ರಯ, ಪ್ರಸಿದ್ದ ಜನಪರ ಯೋಜನೆಗಳಾಗಿ ಇಂದೂ ಇವೆ. ಅವರ ಹಾದಿಯಲ್ಲಿಯೇ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸಾಗಿದ್ದಾರೆ, ಈ ಬಾರಿ ಛಲಕ್ಕೆ ಬಿದ್ದು ಶಿರಸಿಯಲ್ಲಿ ಗೆದ್ದಿದ್ದಾರೆ. ನಾಮಧಾರಿಗಳು ಜಿಲ್ಲೆಗೆ ನಾಯಕತ್ವ ನೀಡುವ ಶಕ್ತಿ ಹೊಂದಿದವರು. ಬಂಗಾರಪ್ಪನವರ ಅಭಿಮಾನಿಗಳು, ಯುವಕರು ತಾಳ್ಮೆಯಿಂದ ಜನ ಸಂಪರ್ಕ ಸಾಧಿಸಿ ಬಂಗಾರಪ್ಪನವರ ಅಶೆಯನ್ನು ಸಾಕಾರಗೊಳಿಸಿ ಎಂದು ಕರೆ ನೀಡಿದ್ರು..
ಬಳಿಕ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಬಂಗಾರಪ್ಪನವರ ಆದರ್ಶದಿಂದ,ಅವರು ತೋರಿಸಿದ ಮಾರ್ಗದರ್ಶನದಿಂದ ಬಂದ ಶಿಷ್ಯನೆಂದು ಹೆಮ್ಮೆಯಿಂದ ಹೇಳುತ್ತೇನೆ. ಬಂಗಾರಪ್ಪ ಕೇವಲ ನಾಲ್ಕುವರೆ ವರ್ಷ ಅಧಿಕಾರ ಅನುಭವಿಸಿದರೂ ಮುಖ್ಯಮಂತ್ರಿಯಾಗಿ ಕೇವಲ ಎರಡು ವರ್ಷ ಮಾತ್ರ ಇದ್ದರು. ತಮ್ಮ ಕಿರಿದಾದ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆ ದೇಶದ ಇನ್ಯಾವ ಮುಖ್ಯಮಂತ್ರಿಗಳೂ ಸಾಧಿಸಿಲ್ಲ. ಎಂದು ಹೇಳಿದ್ರು..
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘದ ಅಧ್ಯಕ್ಷ,ಮಾಜಿ ಸಚಿವರಾದ ಆರ್.ಎನ್.ನಾಯ್ಕ ಮಾತನಾಡಿ ಯಾವುದೇ ಜಾತಿ,ಮತ,ಪಂಥ ಎಂದು ಭೇದ-ಭಾವ ನಡೆಸದೆ ಆಡಳಿತ ನಡೆಸಿದ ಕಿರ್ತಿ ಬಂಗಾರಪ್ಪನವರಿಗೆ ಸಲ್ಲುತ್ತದೆ ಎಂದು ಅವರೊಂದಿಗಿನ ಒಡನಾಟ ಸ್ಮರಿಸಿದ್ರು..
ಈ ವೇಳೆ ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್, ಮಾಜಿ ಜಿ.ಪಂ.ಅಧ್ಯಕ್ಷ ಆರ್.ಎಸ್.ರಾಯ್ಕರ್, ದಿ.ಎಸ್.ಬಂಗಾರಪ್ಪ ಪ್ರತಿಷ್ಟಾನದ ಅಧ್ಯಕ್ಷ ಆರ್.ಪಿ.ನಾಯ್ಕ, ಜಿಲ್ಲಾ ನಾಮಧಾರಿ ಸಂಘದ ಕಾರ್ಯದರ್ಶಿ ಎನ್.ಕೆ.ನಾಯ್ಕ ಉಪಸ್ಥಿತರಿದ್ರು..
ನಾಗರಾಜ್ ನಾಯ್ಕ, ನುಡಿಸಿರಿ ನ್ಯೂಸ್, ಹೊನ್ನಾವರ