ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಗದು ಹಾಗೂ ಮನೆಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ಸುಳ್ಳು ಹೇಳಿ ಆರೋಪಿಗಳು ಕರೆದೊಯ್ದು ತಾಯಿಯ ಪ್ರಜ್ಞೆ ತಪ್ಪಿಸಿ, ಮಗುವನ್ನು ಅಪಹರಿಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ. ಅರ್ಗೋಡ ಪೊಲೀಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿನ ಪ್ರಕಾರ, ಅಕ್ಟೋಬರ್ 22 ರಂದು ದುರ್ಗಾಪೂಜಾ ಪಂಗಡಗಳಿಗೆ ಭೇಟಿ ನೀಡಲು ತನ್ನ ಮಗನೊಂದಿಗೆ ಹೊರಟಿದ್ದಾಗಿ ಮಹಿಳೆ ತಿಳಿಸಿದ್ದಾರೆ.
ದಂಪತಿ ನಗರದ ಹಿನು ಪ್ರದೇಶದ ಹೊರಗಿನ ಟೀ ಸ್ಟಾಲ್ನಲ್ಲಿ ತಿಂಡಿ ತಿನ್ನುತ್ತಿದ್ದರು, ಆ ಸಮಯದಲ್ಲಿ ಮೋಟಾರು ಬೈಕಿನಲ್ಲಿ ಬಂದ ಆರೋಪಿಗಳು, ಧೋನಿ ದುರ್ಗಾ ಪೂಜೆ ಹಿನ್ನೆಲೆಯಲ್ಲಿ ಬಡವರಿಗೆ 5 ಸಾವಿರ ರೂ ನಗದು ಹಾಗೂ ಮನೆಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ಹೇಳಿದ್ದರು.
ಜಗನ್ನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಿಚಿ ಬಗಾನ್ ಪ್ರದೇಶದ ನಿವಾಸಿಯಾಗಿರುವ ಮಹಿಳೆಯನ್ನು ಹರ್ಮುದಲ್ಲಿನ ವಿದ್ಯುತ್ ಸರಬರಾಜು ಕಚೇರಿಗೆ ಕರೆದೊಯ್ದರು.
ಈ ಫ್ಲಾಟ್ಗಳು ಲಭ್ಯವಿದೆ ಎಂದು ಯಾವುದೋ ನಕ್ಷೆ ತೋರಿಸುತ್ತಾ ಸುಳ್ಳು ಹೇಳಿ, ಬಿಸ್ಕತ್ತು ಹಾಗೂ ನೀರನ್ನು ಕೈಗಿತ್ತಿದ್ದಾರೆ. ಬಿಸ್ಕತ್ತು ತಿಂದ ಕೂಡಲೇ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇಬ್ಬರಿಗೂ ಪ್ರಜ್ಞೆ ಮರಳಿ ಬರುವಷ್ಟರೊಳಗೆ ತಮ್ಮ ಮಗು ಕಾಣೆಯಾಗಿತ್ತು, ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಿ ಹುಡುಕಾಡಿದರೂ ಸಿಗಲಿಲ್ಲ ಎಂದು ಹೇಳಿದ್ದಾರೆ.
ಪ್ರಕರಣವನ್ನು ಭೇದಿಸಲು ಹಲವು ತಂಡಗಳನ್ನು ರಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಸುಳಿವು ಪಡೆಯಲು ಸಮೀಪದ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ದುರ್ಗಾ ಪೂಜೆ ಸಂದರ್ಭದಲ್ಲಿ ಕೋಲ್ಕತ್ತಾ ಹಾಗೂಪಶ್ಚಿಮ ಬಂಗಾಳದ ಇತರೆ ಭಾಗಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಿವೆ. ಜನರನ್ನು ವಂಚಿಸಲು ಬಟ್ಟೆ, ಸಿಹಿ ತಿಂಡಿಗಳನ್ನು ಉಚಿತವಾಗಿ ಕೊಡುವುದಾಗಿ ಹೇಳಿ ಮೋಸಮಾಡುತ್ತಿದ್ದಾರೆ. ಹಲವು ಮಹಿಳೆಯರು ಇಂತಹ ವಂಚನೆಗೆ ಸಂಬಂಧಿಸಿದಂತೆ ಕರೆಗಳನ್ನು ಸ್ವೀಕರಿಸಿದ್ದಾರೆ.