ಅಂಕೋಲಾ : ಅಲಗೇರಿ ಬಳಿ ನಿರ್ಮಿಸಲಾಗುವ ನಾಗರಿಕ ವಿಮಾನ ನಿಲ್ದಾಣ ಯೋಜನೆಯಲ್ಲಿ ನಿರಾಶ್ರಿತರಿಗೆ ಬಿಜೆಪಿಯಿಂದ ಅನ್ಯಾಯವಾಗಿದೆ ಎನ್ನುವುದು ಸತ್ಯಕ್ಕೆ ದೂರವಾದದ್ದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಹೇಳಿದರು.
ಪಟ್ಟಣದ ಖಾಸಗಿ ಹೊಟೇಲಿನಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ವಿಮಾನ ನಿಲ್ದಾಣ ಯೋಜನೆಯಿಂದ ನಿರಾಶ್ರಿತರಾಗುತ್ತಿರುವವರ ಸಮಸ್ಯೆಗಳ ಕುರಿತು, ಹಾಲಿ ಶಾಸಕರು ಹಾಗೂ ಸರಕಾರ ಕ್ರಮ ಕೈಗೊಳ್ಳುತ್ತಿರುವದನ್ನು ಅಭಿನಂದಿಸುತ್ತೇವೆ. ಆದರೆ ಮಾಜಿ ಶಾಸಕಿ ಹಾಗೂ ಬಿಜೆಪಿ ಸರಕಾರ ಅನ್ಯಾಯ ಮಾಡಿದೆ ಎಂದು ಸುರೇಶ ನಾಯಕ ಅಲಗೇರಿ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಹೇಳಿದ್ರು…
ಅಲಗೇರಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾದಾಗಿನಿಂದ ಮಾಜಿ ಶಾಸಕಿ ರೂಪಾಲಿ ನಾಯ್ಕ ನಿರಾಶ್ರಿತರ ಪರವಾಗಿಯೇ ನಿಂತಿದ್ದಾರೆ. ಇದು ಇಲ್ಲಿನ ಎಲ್ಲ ನಿರಾಶ್ರಿತರಿಗೂ ಗೊತ್ತಿರುವ ಸಂಗತಿ. ಸೂಕ್ತ ಪರಿಹಾರ ಘೋಷಣೆಯಾಗುವವರೆಗೂ ನಿರಾಶ್ರಿತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸರಕಾರಕ್ಕೆ ಪ್ರಾರಂಭದಲ್ಲೇ ತಿಳಿಸಿದ್ದರು. ಅಧಿಕಾರಿಗಳು ಭೂಸ್ವಾಧೀನಕ್ಕೆ ಮೂರು ಬಾರಿ ನೋಟಿಸ್ ನೀಡಿದರೂ ರೂಪಾಲಿ ಎಸ್.ನಾಯ್ಕ ಅದನ್ನು ತಡೆಹಿಡಿಯುವಲ್ಲಿ ಸಫಲರಾಗಿದ್ದರು. ಈ ಮೂಲಕ ನಿರಾಶ್ರಿತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ರೂಪಾಲಿ ನಾಯ್ಕ ಪ್ರಯತ್ನ ನಡೆಸಿದ್ದರು.
ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಅವರೂ ಸಭೆ ನಡೆಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ರೂಪಾಲಿ ನಾಯ್ಕ ಅವರು ನಿರಾಶ್ರಿತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಸಚಿವರೂ ಕೂಡ ಸಭೆಯನ್ನು ನಡೆಸಿದ್ದರು. ಅಲಗೇರಿ ವಿಮಾನ ನಿಲ್ದಾಣದ ಕುರಿತು ಸದನದಲ್ಲಿಯೂ ಗಟ್ಟಿ ಧ್ವನಿಯಲ್ಲಿ ಮಂಡಿಸಿದ್ದರು. ಮುಖ್ಯಮಂತ್ರಿ ಬಳಿ ನಿಯೋಗ ಹೋಗುವಷ್ಟರಲ್ಲಿ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆಯ ಕಾರಣದಿಂದ ಮುಂದಿನ ಪ್ರಕ್ರಿಯೆ ಸಾಧ್ಯವಾಗಿರಲಿಲ್ಲ. ಅಧಿಕಾರಿಗಳು, ಶಾಸಕರು, ಸರಕಾರ ಬದಲಾದರೂ ಹಿಂದೆ ಪ್ರಾರಂಭದಲ್ಲಿ ನಡೆಸಿದ ಪ್ರಯತ್ನಗಳೇ ಫಲಪ್ರದವಾಗುತ್ತವೆ ಎಂದರು.
ನಿರಾಶ್ರಿತರ ಪರವಾಗಿ ಅಲಗೇರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ ನಾಯಕ ಮಾತನಾಡಿ ಮುಡಗೇರಿ ನಿರಾಶ್ರಿತರಿಗೆ ಯಾವ ಸರ್ಕಾರವೂ ನೀಡದ ಪರಿಹಾರವನ್ನು ದೊರಕಿಸಿಕೊಟ್ಟವರು ರೂಪಾಲಿ ಎಸ್.ನಾಯ್ಕ ಅವರು. ಅವರಿಗೆ ಬಡವರು, ನಿರಾಶ್ರಿತರ ಬಗ್ಗೆ ಇರುವ ಕಾಳಜಿಗೆ ಇದೇ ನಿದರ್ಶನವಾಗಿದೆ. ಅದೇ ಪ್ರಕಾರ ವಿಮಾನ ನಿಲ್ದಾಣ ನಿರಾಶ್ರಿತರ ಬಗ್ಗೆಯೂ ಅಪಾರ ಕಾಳಜಿ ಹೊಂದಿ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಅಲಗೇರಿಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿ ನಿರಾಶ್ರಿತರ ಸಮಸ್ಯೆಗಳ ಪರವಾಗಿ ವಾದಿಸಿದ್ದಾರೆ. ಪಟ್ಟಣದ ನಾಡವರ ಸಭಾಭವನದಲ್ಲೂ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಸಭೆ ನಡೆಸಿ ನಿರಾಶ್ರಿತರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ಇವೆಲ್ಲವುಗಳ ಪರಿಣಾಮವಾಗಿಯೇ ಸರಕಾರದ ಮಟ್ಟದಲ್ಲಿ ಮಹತ್ತರ ಬೆಳವಣಿಗೆಗಳು ಆಗಿವೆ ಎಂದು ಹೇಳಿದ್ರು…
ಗಣೇಶ ಚಿನ್ನಾ ನಾಯ್ಕ ಮಾತನಾಡಿ ದಿನಕರ ದೇಸಾಯಿಯವರ ಹುಟ್ಟೂರಿನ ಬಗ್ಗೆ ಜನರಿಗೆ ಭಾವನಾತ್ಮಕ ಸಂಬಂಧವಿದ್ದರೂ ದೇಶಕ್ಕಾಗಿ ನಿರಾಶ್ರಿತರಾಗಲು ತಯಾರಾಗಿದ್ದೇವೆ. ಮಾಜಿ ಶಾಸಕಿಯವರ, ಹಿಂದಿನ ಸರಕಾರದ ಪ್ರಯತ್ನಗಳನ್ನು ಇಂದಿನವರೂ ಮುಂದುವರೆಸಿದ್ದು ಸ್ವಾಗತಾರ್ಹ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಮಾನ ನಿಲ್ದಾಣ ನಿರಾಶ್ರಿತರ ಸಭೆ ನಡೆಸಿರುವುದಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಸ್ವಾಗತಿಸಿದ್ದಾರೆ. ನಮ್ಮ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ, ಪುನರ್ವಸತಿ, ಉದ್ಯೋಗ ದೊರೆಯುವುದಾದರೆ ಯಾರೇ ಪ್ರಯತ್ನಿಸಿದರೂ ಮಾಜಿ ಶಾಸಕರು ಬೆಂಬಲಿಸುತ್ತಾರೆ. ಇದರಲ್ಲಿ ಅನವಶ್ಯಕ ರಾಜಕೀಯ ಮಾಡುವುದು ತಪ್ಪು ಎಂದು ಹೇಳಿದ್ರು..
ಉದ್ಯಮಿ ರಾಜು ನಾಯ್ಕ ಮಾತನಾಡಿ ಸೂಕ್ತ ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆ ತೃಪ್ತಿದಾಯಕವಾಗಲಿ. ಕಾಂಗ್ರೆಸ್ ಸರ್ಕಾರ ವಿಮಾನ ನಿಲ್ದಾಣ ನಿರಾಶ್ರಿತರಿಗೆ ಪ್ರತಿ ಕುಟುಂಬಕ್ಕೊಂದು ಉದ್ಯೋಗ ಕೊಡುವ ಬಗ್ಗೆ ಭೂಸ್ವಾಧೀನಕ್ಕೆ ಮುನ್ನವೇ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಿ ಎಂದರು. ವಿಜಯಕುಮಾರ ಗಾಂವಕರ ಮತ್ತು ನಾಗರಾಜ ಶಾಂಬಾ ನಾಯ್ಕ ಮಾತನಾಡಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ 2013ರ ಕಾಯಿದೆಯನ್ನೂ ಪರಿಗಣಿಸಲಿ ಎಂದರು. ಮಾಧ್ಯಮಗೋಷ್ಠಿಯಲ್ಲಿ ಕಿಶೋರ ನಾಯ್ಕ, ಶ್ರೀಕಾಂತ ನಾಯ್ಕಉಪಸ್ಥಿತರಿದ್ರು…