ದಾಂಡೇಲಿ : ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ನಡೆದ ರಾಮಲೀಲೋತ್ಸವ ಕಾರ್ಯಕ್ರಮವು ಜಾತಿ, ಮತ, ಧರ್ಮ ಎಂಬ ಬೇಧವಿಲ್ಲದೆ ಎಲ್ಲರ ಭಾಗವಹಿಸುವಿಕೆಯ ಮೂಲಕ ಐಕ್ಯತೆ ಮೆರೆಯುವದರೊಂದಿಗೆ ಮಂಗಳವಾರ ಅಭೂತಪೂರ್ವವಾಗಿ ಹಾಗೂ ಆಕರ್ಷಣೀಯವಾಗಿ ನಡೆಯಿತು.
ಸಾಯಂಕಾಲ ಸಮಯ: 7 ಗಂಟೆಯಿಂದ ರಿಂದ 8.30 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ 50 ಅಡಿ ಎತ್ತರದ ರಾವಣನ ಮೂರ್ತಿ, 46 ಅಡಿ ಎತ್ತರದ ಕುಂಭಕರ್ಣನ ಮತ್ತು ಮೇಘನಾಥನ ಮೂರ್ತಿಯನ್ನು ಸಹಸ್ರ ಸಹಸ್ರ ಸಂಖ್ಯೆಯ ಜನರ ಸಮಾಗಮದೊಂದಿಗೆ ಸುಡಲಾಯಿತು. ಈ ಮೂರ್ತಿಗಳಿಗೆ ಅಗ್ನಿ ಸ್ಪರ್ಷ ಮಾಡುವ ಮೊದಲು ಕೆಲ ಹೊತ್ತು ಕಾರ್ಖಾನೆಯ ವತಿಯಿಂದ ಅತ್ಯಾಕರ್ಷಕ ಸುಡುಮದ್ದು ಪ್ರದರ್ಶನಗೊಂಡಿತು. ಬಾನಂಗಳದಲ್ಲಿ ರಂಗು ರಂಗಿನ ಚಿತ್ತಾರ, ಚಟಪಟ ಸದ್ದು, ವಿವಿಧ ಆಕರ್ಷಕ ಶಬ್ದಗಳು ಇವು ಸುಡುಮದ್ದು ಪ್ರದರ್ಶನದಲ್ಲಿ ಅಡಕವಾಗಿದ್ದವು.
ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 40 ರಿಂದ 50 ಸಾವಿರ ಜನ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ರಾವಣ, ಕುಂಭಕರ್ಣ ಮತ್ತು ಮೇಘನಾಥನ ಪ್ರತಿಮೆಯನ್ನು ಸುಡುವ ಕಾರ್ಯಕ್ರಮವನ್ನು ನೋಡಲು ನಗರದ ಜನ ಮಾತ್ರವಲ್ಲದೇ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.
ವೈವಿಧ್ಯಮಯ ಕಾರ್ಯಕ್ರಮದಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ದಂಪತಿ, ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಭೀಮಣ್ಣ.ಎಂ.ಸೂರಿ, ಕಾರ್ಖಾನೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು.