ಜೋಯಿಡಾ : ಸಂಘದ ಸಾಮಾನ್ಯ ಸಭೆ ನಡೆಯದೆ ಮೂರ್ನಾಲ್ಕು ವರ್ಷ ಆಯಿತಂತೆ. ಸಂಘದ ಸಾಮಾನ್ಯ ಸಭೆ ಸಕಾಲಕ್ಕೆ ಆಗುವ ನಿಟ್ಟಿನಲ್ಲಿ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಮುಂದಾಗದೆ ಇದ್ದಾಗ ಸಂಘದ ಆಡಳಿತ ಮಂಡಳಿಯ ಸದಸ್ಯರು ಯಾಕೆ ಸುಮ್ಮನಾದರು. ಹೀಗೆ ನೂರಾರು ಪ್ರಶ್ನೆಗಳಿಗೆ ಆಹಾರವಾಗುತ್ತಿದೆ ಜೋಯಿಡಾ ಸೇವಾ ಸಹಕಾರಿ ಸಂಘ. ಸಂಘದ ಆಡಳಿತ ಮಂಡಳಿಯ ನಿರ್ಲಕ್ಷ್ಯ ದೌರ್ಬಲ್ಯದ ಪರಿಣಾಮವಾಗಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಲು ಕಾರಣವಾಗಿದೆ ಎಂದೇ ಚರ್ಚೆ ನಡೆಯುತ್ತಿದೆ.
ಹಾಗೆ ನೋಡಿದರೇ, ಈ ಹಿಂದೆ ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದವರು ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿದ್ದರೂ, ಅವರು ಸಹ ಮೌನವನ್ನೆ ವಹಿಸಿರುವುದು ಪರಮ ಆಶ್ಚರ್ಯ ಎಂದೇ ಹೇಳಲಾಗುತ್ತಿದೆ.
ಸಂಘದ ಅಧ್ಯಕ್ಷರಿಗೆ ಅನುಭವದ ಕೊರತೆ ಇದೆ ಎನ್ನುವುದಾದರೆ ಸಂಘದ ಸಾಮಾನ್ಯ ಸಭೆಯನ್ನು ಕಾಲಕಾಲಕ್ಕೆ ಮಾಡಿಸಬೇಕಾದ ಗುರುತರವಾದ ಜವಾಬ್ದಾರಿ ಸಂಘದ ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಎಲ್ಲ ಸದಸ್ಯರ ಆದ್ಯ ಜವಾಬ್ದಾರಿಯು ಆಗಿದೆ. ಹೀಗಿರುವಾಗ ಆಡಳಿತ ಮಂಡಳಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಎಡವಿದರೇ, ಅಥವಾ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆದರೆ ನಮಗೇನು ನಷ್ಟ ಎಂಬ ನಿಷ್ಕಾಳಜಿ ವಹಿಸಿರಬಹುದೇ ಎಂಬ ಅನುಮಾನವು ಸಹಜವಾಗಿ ಮೂಡತೊಡಗಿದೆ.
ಸಂಘದ ಅಧ್ಯಕ್ಷರಿಗೆ ಅನುಭವದ ಕೊರತೆ ಎಂದಾದರೆ ಸಂಘದ ಕಾರ್ಯನಿರ್ವಹಣಾ ಅಧಿಕಾರಿ ನೀಡಿದ ಚೆಕ್ ಗಳಿಗೆ ಭರ್ಜರಿ ಸಹಿ ಹಾಕುವಾಗ ಯಾವುದಕ್ಕೆ ಎನ್ನುವ ಪ್ರಶ್ನೆ ಮಾಡುವ ಅನುಭವವೂ ಇಲ್ಲವಾಯಿತೆ. ಅಥವಾ ಪ್ರಶ್ನೆ ಮಾಡಲು ಧೈರ್ಯ ಸಾಲದಾಯಿತೆ, ಅಥವಾ ಏನಾದರೂ ಒಳ ಒಪ್ಪಂದ ನಡೆಯಿತೆ ಎಂಬ ಹಲವು ಅನುಮಾನವು ಅಧ್ಯಕ್ಷ ರಮೇಶ್ ನಾಯ್ಕ ಅವರ ಮೇಲಿದೆ.
ಒಂದು ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಯುವಂತಾಗಲು ಅಧ್ಯಕ್ಷ ಮತ್ತು ಕಾರ್ಯನಿರ್ವಹಣಾಧಿಕಾರಿ ಮೂಲ ಕಾರಣವಾದರೇ, ಸಂಘವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಬೇಕಾದ ಆಡಳಿತ ಮಂಡಳಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ಮರೆತು ನಡೆದಿರುವುದು ಕೂಡ ಪ್ರಮುಖ ಕಾರಣ ಆಗಿದೆ. ಸಂಘದ ಸದಸ್ಯರು ಸಂಘವನ್ನು ಅಭಿವೃದ್ಧಿಯೊಡೆಗೆ ಕೊಂಡೊಯ್ಯಬೇಕೆನ್ನುವ ಒಂದೇ ಒಂದು ಉದ್ದೇಶದಿಂದ ತಮ್ಮ ತಮ್ಮ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತಾರೆ. ಸಂಘದ ಆಡಳಿತ ಮಂಡಳಿಯ ಸದಸ್ಯರಾದವರು ಸಂಘದಲ್ಲಿ ಆಗಿರುವ ಆಗುತ್ತಿರುವ ನ್ಯೂನ್ಯತೆಗಳನ್ನು ಎತ್ತಿ ತೋರಿಸಿ ಸರಿಪಡಿಸಿ ಸಂಘವನ್ನು ಮುನ್ನಡೆಸಬೇಕೆ ವಿನಹ, ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿರೋದನ್ನು ಗೊತ್ತಿದ್ದು ಗೊತ್ತಿಲ್ಲದಂತೆ ಮೌನ ವಹಿಸುವುದಾದರೇ, ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿ ಯಾಕೆ ಇರಬೇಕು. ಹಾಗೆ ನೋಡಿದರೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಆಡಳಿತ ಮಂಡಳಿ ಎನ್ನುವ ಮಟ್ಟಕ್ಕೆ ಸಂಘದ ಆಡಳಿತ ಮಂಡಳಿಯ ಸದಸ್ಯರು ಇರುವುದರಿಂದಲೇ ಕೋಟ್ಯಂತರ ರೂಪಾಯಿ ಆವ್ಯವಹಾರ ನಡೆಯಲು ಕಾರಣವಾಯಿತು.
ಇಲ್ಲಿ ಜೋಯಿಡಾ ಸೇವಾ ಸಹಕಾರಿ ಸಂಘದಲ್ಲಿ ನಡೆದ ಭಯಂಕರ ಅವ್ಯವಹಾರಕ್ಕೆ ಸಂಘದ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಯ ಜೊತೆ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಘವನ್ನು ನಿಯಂತ್ರಿಸಬೇಕಾದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿಯ ಮೌನ ನಿಲುವು ಪ್ರಮುಖ ಕಾರಣ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಸಹಕಾರ ಸಂಘಗಳ ಉಪನಿಬಂಧಕರ ಕಾರ್ಯಾಲಯವು ಸಹಕಾರ ಸಂಘಗಳ ಮೂಲ ಉದ್ದೇಶದಂತೆ ಕರ್ತವ್ಯವನ್ನು ನಿರ್ವಹಿಸಿದ್ದೇ ಆದಲ್ಲಿ ಸಂಘದ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿಯನ್ನು ತನಿಖೆ ಮಾಡುವುದರ ಜೊತೆಗೆ ಈ ಸಂಘದ ಅವ್ಯವಹಾರದ ಕುರಿತಂತೆ ಸರಕಾರಕ್ಕೆ ವರದಿಯನ್ನು ಒಪ್ಪಿಸಿ ಸಿ ಓ ಡಿ ತನಿಖೆಯಾಗುವ ನಿಟ್ಟಿನಲ್ಲಿ ಮುಂದಡಿಯಿಡಬೇಕಾಗಿದೆ.