ಅಕ್ಟೋಬರ್ 10 ರಂದು ನಾಪತ್ತೆಯಾದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯ ಭಟ್ಕಳ ಗ್ರಾಮೀಣ ಠಾಣೆಗೆ ಕುಟುಂಬದ ಸದಸ್ಯರೊಂದಿಗೆ ಹಾಜರು

ಭಟ್ಕಳ: ಕಳೆದ ಅಕ್ಟೋಬರ್ 10 ರಂದು ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿ ನಾಪತ್ತೆಯಾದ
ಭಟ್ಕಳ ಸರಕಾರಿ ಆಸ್ಪತ್ರೆಯ ಚರ್ಮ ರೋಗ ತಜ್ಞ ವೈದ್ಯ ಡಾ. ಉಮೇಶ ಎಚ್.ಟಿ. ಶುಕ್ರವಾರ ಸಂಜೆ ಭಟ್ಕಳ ಗ್ರಾಮೀಣ ಠಾಣೆಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಜರಾಗಿದ್ದಾರೆ.

ಪಟ್ಟಣದ ಡಿ.ಪಿ. ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸಚಿದ್ದ ಮೂಲತಃ ಹರಪನಹಳ್ಳಿ ಹಳ್ಳಿ ನಿವಾಸಿ ಡಾ. ಎಚ್.ಟಿ ಉಮೇಶ ಅ.10 ರ ಬೆಳ್ಳಿಗ್ಗೆ ತನ್ನ ಮನೆಯಿಂದ ಕರ್ತವ್ಯಕ್ಕೆಂದು ತೆರಳಿದವರು ಮರಳಿ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದರು. ಈ ಕುರಿತು ವೈದ್ಯರ ಪತ್ನಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ದಾಖಲಾದ ದಿನದಿಂದ ಪೊಲೀಸರ ಸತತ ಪರಿಶ್ರಮದ ಪರಿಣಾಮ ವೈದ್ಯ ಡಾ. ಉಮೇಶ ಎಚ್.ಟಿ ಮುಂಬೈನಲ್ಲಿ ಇರುವುದು ಪತ್ತೆ ಹಚ್ಚಲಾಗಿತ್ತು. ಭಟ್ಕಳದಿಂದ ಹೊರಟ ವೈದ್ಯರು ತಮ್ಮ ಕಾರಿನ ಮೂಲಕ ಕುಂದಾಪುರಕ್ಕೆ ತೆರಳಿ ಅಲ್ಲಿಂದ ತಮ್ಮ ಪ್ರಯಾಣ ಬೆಳೆಸಿದ ಅವರು ಶಿವಮೊಗ್ಗ ಬಳ್ಳಾರಿ ಮಾರ್ಗವಾಗಿ ಅಹಮದಾಬಾದನಿಂದ ಮುಂಬೈಗೆ ತೆರಳಿರುವ ಮಾಹಿತಿ ಪೋಲಿಸರಿಗೆ ತಿಳಿದು ಬಂದಿದೆ. ನಿರಂತರವಾಗಿ ಪೋಲಿಸರು ವೈದ್ಯರ ಸಂಪರ್ಕ ಮಾಡುತ್ತಾ ದೂರದ ಮುಂಬಯಿನಲ್ಲಿ ವೈದ್ಯ ಉಮೇಶ ಇರುವುದು ದ್ರಢಪಡಿಸಿಕೊಂಡಿದ್ದರು. ಇದಕ್ಕು ಪೂರ್ವದಲ್ಲಿ ಪೋಲಿಸರು ವೈದ್ಯರನ್ನು ಶಿವಮೊಗ್ಗ ತನಕ ಟ್ರಾಕ್ ಮಾಡಿದ ಅಲ್ಲಿ ಹುಡುಕಾಟ ಮಾಡಿದ್ದರು. ಕೊನೆಯಲ್ಲಿ ಮುಂಬೈನಲ್ಲಿ ವೈದ್ಯ ಇರುವುದು ದ್ರಢಪಟ್ಟಿತ್ತು.

ನಂತರ ವೈದ್ಯರು ತಮ್ಮ ಊರಿನಲ್ಲಿರುವ ತಂದೆ ಹಾಗೂ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ರಾಣಿಬೆನ್ನೂರಿಗೆ ಬರುವುದಾಗಿ ತಿಳಿಸಿದ ಹಿನ್ನೆಲೆ ವೈದ್ಯರ ಕುಟುಂಬಸ್ಥರು ಅಲ್ಲಿಗೆ ತೆರಳಿ ಅಲ್ಲಿಂದ ಭಟ್ಕಳಕ್ಕೆ ವೈದ್ಯರನ್ನು ಕರೆತರಲಾಯಿತು.

ಗ್ರಾಮೀಣ ಠಾಣೆಯ ಸಿಪಿಐ ಚಂದನ ಗೋಪಾಲ ಹಾಗೂ ಪಿಎಸ್ಐ ಮಯೂರ, ಪಟ್ಟಣಶೆಟ್ಟಿ,ಮತ್ತು ಪಿಎಸ್ಐ ಶ್ರೀಧರ್ ನಾಯ್ಕ ಅವರು ವೈದ್ಯರನ್ನು ಸಂಪರ್ಕಿಸಿದ್ದು, ಬಳಿಕ ಕುಟುಂಬದ ಸದಸ್ಯರೊಂದಿಗೆ ಗ್ರಾಮೀಣ ಠಾಣೆಗೆ ಹಾಜರಾಗಿದ್ದಾರೆ.

ಈ ಮೂಲಕ ಭಟ್ಕಳದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವೈದ್ಯರ ನಾಪತ್ತೆ ಪ್ರಕರಣಕ್ಕೆ ಅಂತ್ಯ ಸಿಕ್ಕಂತಾಗಿದೆ.