ಹೊನ್ನಾವರ :- ತಾ. ಹಿರೇಬೈಲ್ ಗ್ರಾಮದ ಚಂದುಬೇಣದಲ್ಲಿರುವ ಶ್ರಿ ಚಂದ್ರಮೌಳೀಶ್ವರ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಯಾಗಶಾಲೆಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
‘ಹರಿ ಮತ್ತು ಹರ’ ಇಬ್ಬರೂ ಮೇಳೈಸಿರುವ ಅಪರೂಪದ ಸ್ಥಳ ಚಂದುಬೇಣ ಕ್ಷೇತ್ರ. ಇಲ್ಲಿ ಶ್ರೀ ಹರಿಯು ಲಕ್ಷ್ಮೀ ನಾರಾಯಣನಾಗಿ, ಹರನು ಚಂದ್ರಮೌಳೇಶ್ವರನಾಗಿ ಭಕ್ತರ ಕಷ್ಟಗಳನ್ನು ಕಳೆದು, ಇಷ್ಟಾರ್ಥಗಳನ್ನು ಈಡೇರಿಸುತ್ತಾ ನೆಲೆಸಿದ್ದಾರೆ. ಹೊನ್ನಾವರದಿಂದ 25 ಕಿ.ಮೀ ಅಂತರದಲ್ಲಿ ಇರೋ ಈ ಪುರಾತನ ದೇವಾಲಯವು, 800ವರ್ಷಗಳ ಇತಿಹಾಸ ಹೊಂದಿದ್ದು, ಐತಿಹಾಸಿಕ ಪ್ರಸಿದ್ಧಿ ಪಡೆದಿದೆ
ದೇವಾಲಯದ ಗರ್ಭಗುಡಿಯನ್ನು ಕಲ್ಲಿನಿಂದ ಗೋಲಾಕೃತಿಯಲ್ಲಿ ಸುಂದರವಾಗಿ ನಿರ್ಮಿಸಿದ್ದು, ಇಲ್ಲಿನ ವಾಸ್ತುಶಿಲ್ಪದ ವಿಶೇಷತೆಯಾಗಿದೆ. ಈ ದೇವಾಲಯದಲ್ಲಿ ಪ್ರತಿ ಸಂಕಷ್ಟಿ ಚತುರ್ಥಿಯಂದು ಗಣಹೋಮ ಹಾಗೂ ವರ್ಧಂತಿ ಮಹೋತ್ಸವದಂದು ಹೋಮ ಹವನಗಳನ್ನು ಮಾಡಲಾಗುತ್ತದೆ. ಈ ಕಾರಣಕ್ಕೆ ದೇವಸ್ಥಾನಕ್ಕೆ ಯಾಗ ಶಾಲೆಯ ಅವಶ್ಯಕತೆ ಇರುವುದರಿಂದ, ಇದೀಗ 11 ಲಕ್ಷದ 54 ಸಾವಿರ ರೂ.ಅಂದಾಜು ವೆಚ್ಚದಲ್ಲಿ ನೂತನ ಯಾಗಶಾಲೆಯನ್ನು ನಿರ್ಮಿಸಲಾಗಿದೆ.
‘ವೇದಮೂರ್ತಿ ಶ್ರೀ ಕಟ್ಟೆ ಶಂಕರ ಭಟ್ಟರ’ ಆಚಾರ್ಯತ್ವದಲ್ಲಿ ಯಾಗ ಶಾಲೆಯ ಉದ್ಘಾಟನಾ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನೆರವೇರಿತು. ಈ ವೇಳೆ ಪ್ರಸನ್ನ ದುರ್ಗಾಶಾಂತಿ, ಅಷ್ಟಾಕ್ಷರಿ ಮಂತ್ರಹವನ, ಪಂಚಾಕ್ಷರಿ ಮಂತ್ರ ಹವನ, ಗಣಹೋಮ ಮೊದಲಾದ ಧಾರ್ಮಿಕ ಸೇವಾ ಕೈಂಕರ್ಯಗಳು ನಡೆದವು.
ನಾಗರಾಜ ನಾಯ್ಕ ನುಡಿಸಿರಿ ನ್ಯೂಸ್, ಹೊನ್ನಾವರ