ಅಂಕೋಲಾ : ಅರಣ್ಯ ಇಲಾಖೆ ಅಂಕೋಲಾ ವಲಯ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಡಿ.ಎಫ್.ಓ ನರೇಂದ್ರ ಹಿತ್ತಲಮಕ್ಕಿ ನೇತೃತ್ವದಲ್ಲಿ ಹೊಸಗದ್ದೆಯ ಪರಿಸರದಲ್ಲಿ ಮುಳ್ಳಣ್ಣು ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಹಾಗೂ ತಾಲೂಕಿ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಪ್ರಶಾಂತ ಬಾದವಾಡಗಿ ಗಿಡವನ್ನು ನೆಟ್ಟು ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದರ ಅವರು ಇಂದಿನ ಆಧುನಿಕತೆಯಲ್ಲಿ ಹಳೆಯ ತಲೆಮಾರುಗಳಲ್ಲಿ ಪ್ರಾಮುಖ್ಯತೆ ಹೊಂದಿದ್ದ ಗಿಡಗಳನ್ನು ಮರೆಯುತ್ತಿದ್ದಾರೆ. ಇಂತಹ ಗಿಡಗಳನ್ನು ಬೆಳೆಸುವದರಿಂದ ಪರಿಸರದ ಸಮತೋಲನವನ್ನು ಕಾಯ್ದುಕೊಳುವದರ ಜೊತೆಗೆ ವಿನಾಶದ ಅಂಚಿನಲ್ಲಿರುವ ಉಪಯುಕ್ತ ಗಿಡಗಳನ್ನು ಉಳಿಸಬಹುದು ಎಂದರು. ನರೇಂದ್ರ ಹಿತ್ತಲಮಕ್ಕಿ ಮಾತನಾಡಿ ಮುಳ್ಳಣ್ಣು ಗಿಡ ಬಹುಪಯೋಗಿಯಾಗಿದೆ.
ವಿಶಿಷ್ಠ ರುಚಿಯ ಜೊತೆಗೆ ಔಷಧೀಯ ಗುಣಗಳುಳ್ಳ ಮುಳ್ಳಣ್ಣು ಗಿಡಗಳನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದ್ದು ಪ್ರಾರಂಭದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸುಮಾರು 200 ಗಿಡಗಳನ್ನು ನೆಡಲಾಗುತ್ತಿದೆ ಎಂದರು. ನ್ಯಾಯವಾದಿ ಉಮೇಶ ನಾಯ್ಕ ಅರಣ್ಯ ಇಲಾಖೆಯ ಸಹಯೋಗ ಮತ್ತು ನರೇಂದ್ರ ಹಿತ್ತಲಮಕ್ಕಿಯವರ ಕಾರ್ಯವನ್ನು ಶ್ಲಾಘಿಸಿದರು. ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ಮಾತನಾಡಿದರು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಯ್ಯ ಅಣ್ಣಯ್ಯ ಗೌಡ, ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿ ಪಿ ನಾಯ್ಕ, ನಿವೃತ್ತ ಡಿ.ಎಫ್.ಓ ಕೃಷ್ಣಮೂರ್ತಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.