ರಾಮಲೀಲೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ- ರಾಜೇಶ ತಿವಾರಿ

ದಾಂಡೇಲಿ : ಜಿಲ್ಲೆಯಲ್ಲಿಯೆ ಅತ್ಯಂತ ಎತ್ತರವಾದ ರಾವಣ, ಕುಂಭಕರ್ಣ ಮತ್ತು ಮೇಘನಾಥ ಮೂರ್ತಿಗಳನ್ನು ಒಳಗೊಂಡ ರಾಮಲೀಲೋತ್ಸವ ಕಾರ್ಯಕ್ರಮವನ್ನು ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ಸರಕಾರದ ನಿಯಾಮವಳಿಯಂತೆ ಅ:24 ರಂದು ಆಯೋಜಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರು ಹೇಳಿದ್ದಾರೆ.

ಅವರು ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಇಂದು ಶುಕ್ರವಾರ ನಡೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸುಗಮ ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಪೊಲೀಸ್ ಇಲಾಖೆಯ ವತಿಯಿಂದ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದರು. ಈ ಬಾರಿ ಅ: 24 ರಂದು ಸಂಜೆ 7 ಗಂಟೆಯಿಂದ 8 ಗಂಟೆಯವೆರೆಗೆ ಬಂಗೂರನಗರದ ಡಿಲಕ್ಸ್ ಮೈದಾನದಲ್ಲಿ ರಾಮ ಲೀಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 50 ಅಡಿ ಎತ್ತರದ ರಾವಣ, 46 ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥನ ಮೂರ್ತಿಗಳ ದಹನ ಕಾರ್ಯಕ್ರಮ ಜರಗಲಿದೆ. ಸರಕಾರದ ಸೂಚನೆಯಂತೆ ಈ ಬಾರಿ ಸುಡುಮದ್ದುಗಳ ಪ್ರದರ್ಶನ ಇರುವುದಿಲ್ಲ ಎಂದರು. ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 40 ರಿಂದ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಸರ್ವರಿಗೂ ಮುಕ್ತ ಅವಕಾಶವಿದೆ ಎಂದು ರಾಜೇಶ ತಿವಾರಿ ಹೇಳಿದರು. ಅ:24 ರ ಬೆಳಿಗ್ಗೆಯಿಂದ ರಾಮ ಲೀಲೋತ್ಸವ ಕಾರ್ಯಕ್ರಮ ಮುಗಿಯುವವರೆಗೆ ಕಾಗದ ಕಾರ್ಖಾನೆಯ ಕಾರ್ಮಿಕರು, ನೌಕರರು, ಅಧಿಕಾರಿಗಳು ಬಿಟ್ಟು ಉಳಿದವರಿಗೆ ಕಾಗದ ಕಾರ್ಖಾನೆಯೊಳಗಡೆ ದ್ವಿಚಕ್ರ ಇಲ್ಲವೇ, ಇನ್ನಿತರ ವಾಹನಗಳ ಮೂಲಕ ಹೋಗುವುದನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಇದೇ ಸಂದರ್ಭದಲ್ಲಿ ರಾಜೇಶ ತಿವಾರಿಯವರು ಮನವಿ ಮಾಡಿದರು.

ಸಿಪಿಐ ಭೀಮಣ್ಣ.ಎಂ.ಸೂರಿ ಅವರು ಮಾತನಾಡಿ ರಾಮಲೀಲೋತ್ಸವ ಮತ್ತು ಶ್ರೀ.ದಾಂಡೇಲಪ್ಪಾ ಜಾತ್ರೆ ಶಾಂತಿಯುತವಾಗಿ ನಡೆಯುವಂತಾಗಲೂ ಇಲಾಖೆ ಈಗಾಗಲೆ ಅಗತ್ಯ ಕ್ರಮವನ್ನು ಕೈಗೊಂಡಿದೆ. ಅ: 24 ರಂದು ಶ್ರೀ.ದಾಂಡೇಲಪ್ಪಾ ಜಾತ್ರೆ ಮತ್ತು ರಾಮ ಲೀಲೋತ್ಸವವಿರುವ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳಿಗೆ ಕನ್ಯಾ ವಿದ್ಯಾಲಯದ ಮೈದಾನದಲ್ಲಿ ಮತ್ತು ಉಳಿದಂತೆ ಕಾರು, ಇನ್ನಿತರ ವಾಹನಗಳಿಗೆ ಜನತಾ ವಿದ್ಯಾಲಯದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲ ಕಲ್ಪಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗುವುದು. ಎಂದಿನಂತೆ ಈ ವರ್ಷವೂ ಶಾಂತಿಯತವಾಗಿ ಜಾತ್ರೆ ಮತ್ತು ರಾಮಲೀಲೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಈಗಾಗಲೆ ಕಾರ್ಯಪ್ರವೃತ್ತವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಜೆ.ಆರ್, ಪಿಎಸೈಗಳಾದ ಐ.ಆರ್.ಗಡ್ಡೇಕರ್, ಶಿವರಾಜ ಬೆಟಗೇರಿ, ಕಾಗದ ಕಾರ್ಖಾನೆಯ ಭದ್ರತಾ ಅಧಿಕಾರಿಗಳಾದ ಕುಶಾಲಪ್ಪ, ಎಸ್.ಜಿ.ಪಾಟೀಲ ಉಪಸ್ಥಿತರಿದ್ದರು.