ಸಿದ್ದಾಪುರ : ದೇಶದ ಹುತಾತ್ಮ ಯೋಧರನ್ನು ಪ್ರತಿಯೊಬ್ಬರೂ ಗೌರವಿಸುವ ನಿಟ್ಟಿನಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ನೆರವಾಗಲಿದೆ ಎಂದು ತಾಲೂಕ ದಂಡಾಧಿಕಾರಿ ಎಮ್.ಆರ್. ಕುಲಕರ್ಣಿ ಹೇಳಿದರು.
ಅವರು ಸಿದ್ದಾಪುರದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಕಾರವಾರದ ನೆಹರು ಯುವ ಕೇಂದ್ರ, ತಾಲೂಕ ಆಡಳಿತ, ತಾಲೂಕ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಳಶ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಿವೃತ್ತ ಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡ ಅವರು ನನ್ನ ಮಣ್ಣು ನನ್ನ ದೇಶದ ವಿಷಯವಾಗಿ ಉಪನ್ಯಾಸ ನೀಡಿದರು.
ಬೆಳಿಗ್ಗೆ ತಾಲೂಕ ಪಂಚಾಯಿತಿ ಆವರಣದಿಂದ ಹೊರಟ ಅಮೃತ ಕಳಶ ಯಾತ್ರೆ ಪಟ್ಟಣದ ತಿಮ್ಮಪ್ಪ ನಾಯ್ಕ ಸರ್ಕಲ್, ರಾಜಮಾರ್ಗ, ಭಗತ್ ಸಿಂಗ್ ಸರ್ಕಲ್, ಪಟ್ಟಣ ಪಂಚಾಯಿತಿ ಮೂಲಕ ಸಾಗಿ ತಾಲೂಕ ಪಂಚಾಯಿತಿಗೆ ಬಂದು ತಲುಪಿತು. ವೀರಗಾಸೆ ಸಾಂಸ್ಕೃತಿಕ ಕಲಾ ತಂಡಗಳು ತೆರೆದ ವಾಹನದಲ್ಲಿ ಅಮೃತ ಕಳಶದ ಮೆರವಣಿಗೆಯೊಂದಿಗೆ ಸಾಗಿದರು.