ಚವಡಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಮಂಜುನಾಥ ಕಟಗಿ ಅವಿರೋಧ ಆಯ್ಕೆ

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಂಜುನಾಥ ಕಟಗಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಚವಡಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ನೇತ್ರಾವತಿ ಬಿಸವಣ್ಣನವರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಅವಿರೋಧ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ನೇತ್ರಾವತಿ ಬಸವಣ್ಣನವರ ಅವರ ವಿರುದ್ಧ ಒಂಬತ್ತು ಜನರು ಅವಿಶ್ವಾಸ ಮೂಡಿಸುವಂತೆ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಡಿ ಅವರಿಗೆ ಮನವಿ ಸಲ್ಲಿಸಿದ್ದರು. ನಂತರ ಇದಕ್ಕೆ ಅಧ್ಯಕ್ಷೆ ಅವಿಶ್ವಾಸ ನಿರ್ಣಯಕ್ಕೆ ಧಾರವಾಡ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ನಂತರ ಅವಿಶ್ವಾಸ ಮಂಡನೆಗೆ ಅರ್ಜಿ ಸಲ್ಲಿಸಿದ್ದ ಸದಸ್ಯರು ಮತ್ತೆ ಧಾರವಾಡ ಹೈಕೋರ್ಟ್ ಗೆ ತೆರಳಿ ತಡೆಯಾಜ್ಞೆ ತೆರವುಗೊಳಿಸಿದರು.

ನಂತರ ಸಚಿವ ಶಿವರಾಮ ಹೆಬ್ಬಾರ್ ಅವರ ಮಧಸ್ಥಿಕೆಯಿಂದ ಚವಡಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ರಾಜಿ ಮಾಡಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷೆ ನೇತ್ರಾವತಿ ರಾಜೀನಾಮೆ ಸಲ್ಲಿಸಿದರು. ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಹದಿಮೂರು ಜನ ಸದಸ್ಯರನ್ನು ಹೊಂದಿದ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಕಟಗಿ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ, ವಾಯ್.ಪಿ.ಪಾಟೀಲ, ಎ.ಆರ್. ಸಿಗ್ನಳ್ಳಿ, ಪಿ. ಜಿ.ಪಾಟೀಲ್, ರವಿ ವಾಲ್ಮೀಕಿ, ಪ್ರದೀಪ ಚವ್ಹಾಣ, ದಾವಲ್ ಮಲವಳ್ಳಿ, ಯಾಖುಬ್ ಯಲವಾಳ, ನಿಂಗಜ್ಜಾ ಕೋಣನಕೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.