ಪ್ರಧಾನಮಂತ್ರಿ ಕಿಸಾನ್ ಫಲಾನುಭವಿಗಳಿಗಾಗಿ ಕೆ.ಸಿ.ಸಿ. ಅಡಿಯಲ್ಲಿ ಮನೆ ಮನೆ ಕೆ.ಸಿ.ಸಿ.ಅಭಿಯಾನ ಕಾರ್ಯಕ್ರಮ

ಭಟ್ಕಳ: ಪ್ರಧಾನಮಂತ್ರಿ ಕಿಸಾನ್ ಫಲಾನುಭವಿಗಳ ಮೇಲೆ ವಿಶೇಷ ಗಮನ ಹರಿಸಿ ಕೆ.ಸಿ.ಸಿ. ಅಡಿಯಲ್ಲಿ ಉಳಿದಿರುವ ಎಲ್ಲಾ ಅರ್ಹ ರೈತರನ್ನು ಜೋಡಣೆ ಮಾಡುವ ಕಾರ್ಯಕ್ರಮ ಹಾಗೂ ಮನೆ ಮನೆ ಕೆ.ಸಿ.ಸಿ. ಅಭಿಯಾನ ಕಾರ್ಯಕ್ರಮವು ಶುಕ್ರವಾರದಂದು ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿ ಭಟ್ಕಳ ಶಾಖೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕನ ಶಾಖಾ ವ್ಯವಸ್ಥಾಪಕ ಆರ್.ವಿ.ನಾಯ್ಕ ‘ಕೆ.ಸಿ.ಸಿ. ಅಡಿಯಲ್ಲಿ ಈಗಾಗಲೇ ಬೆಳೆ ಸಾಲ ನೀಡಲಾಗುತ್ತಿದ್ದು ಆಯಾ ಗ್ರಾಮೀಣ ಸೊಸೈಟಿ ಮಟ್ಟದ ಒಟ್ಟು 8 ಸಂಘಗಳಿದ್ದು ಕೆ.ಸಿ.ಸಿ. ಅಡಿಯಲ್ಲಿ ಬೆಳೆ ಸಾಲ ಒದಗಿಸುವುದಾಗಿದೆ. ಅಕ್ಟೋಬರ್ 1 ರಿಂದ ಡಿಸೆಂಬರ್ 31ರ‌ ತನಕ ಮನೆ ಮನೆ ಕೆ.ಸಿ.ಸಿ. ಅಭಿಯಾನ ಕಾರ್ಯಕ್ರಮವನ್ನು ಬ್ಯಾಂಕ್ ವತಿಯಿಂದ ನಡೆಸಬೇಕಿದೆ. ಇನ್ನು ತನಕ
ಸಾಕಷ್ಟು ರೈತರಿಗೆ ಬೆಳೆ ಸಾಲ ಸಿಕ್ಕಿಲ್ಲವಾಗಿದೆ. ಕೆಲವು ರೈತರಲ್ಲಿ ಅಡಿಕೆ ತೆಂಗು ಸಹಿತ ತೋಟದ ಜಮೀನು ಹಾಗೂ ಗದ್ದೆ ಜಾಗವು ಇದ್ದು, ಕ್ರಷಿ ಸಾಲದ ಬಗ್ಗೆ ಮಾಹಿತಿ‌ ಇಲ್ಲವಾಗಿದೆ. ಒಂದು ವರ್ಷದ ಅವಧಿಯಲ್ಲಿ ಕ್ರಷಿ ಸಾಲ ಪಡೆದು ಬಡ್ಡಿ ರಹಿತ ಸಾಲ ಲಭಿಸಲಿದ್ದು ವರ್ಷದಿಂದ ವರ್ಷಕ್ಕೆ ಹಳೆ ಸಾಲವನ್ನು ತುಂಬಿ ಹೊಸ ಸಾಲ‌ ಪಡೆದುಕೊಳ್ಳಬಹುದು. ಪ್ರತಿಯೊಬ್ಬ ರೈತನ ಬಳಿ ಎಷ್ಟೇ ಗುಂಟೆ ಅಥವಾ ಎಕರೆ ಜಾಗವಿರಲಿ ಅದು ನಿಮ್ಮ‌ ಹೆಸರಿನ ಪಹಣಿ ಪತ್ರಿಕೆಯಲ್ಲಿ ಬೆಳೆಯ ಹೆಸರು ಹಾಗೂ ಜಾಗದ ವಿಸ್ತೀರ್ಣ ನಮೂದಾಗಿದ್ದರೆ ನಿಮ್ಮ‌ ಹತ್ತಿರದ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘವನ್ನು ಸಂಪರ್ಕಿಸಿ ಅಥವಾ ನೇರವಾಗಿ ಕೆ.ಡಿ.ಸಿ.ಸಿ. ಶಾಖೆಗೆ ಬಂದು ಕೆ.ಸಿ.ಸಿ. ಅಡಿಯಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ‌ ಎಂದು ತಿಳಿಸಿದರು.

ಶಾಖಾ ಮೇಲ್ವಿಚಾರಕ ಲೋಹಿತ ಬೋರಕರ್ ಮಾತನಾಡಿ ‘ಭಾರತ ಒಂದು ಕ್ರಷಿ ಪ್ರಧಾನ ದೇಶವಾಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಕ್ರಷಿಯನ್ನು ಬಿಟ್ಟು ಕ್ರಷೀಯೇತಕ ಚಟುವಟಿಕೆಗಳತ್ತ ಸಾಗಿದ್ದೇವೆ. ನಬಾರ್ಡ್ ಹಾಗೂ ಕೇಂದ್ರೀಯ ಕ್ರಷಿ ಮಂತ್ರಾಲವು ಕ್ರಷಿಗೆ ಹಾಗೂ ಕ್ರಷಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂಬ ದ್ರಷ್ಟಿಯಿಂದ ಕ್ರಷಿ ಸಾಲದ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಬ್ಯಾಂಕನಲ್ಲಿ ಬೆಳೆ ಸಾಲದ ಜೊತೆಗೆ ಕ್ರಷಿ ಸಾಲವನ್ನು ಸಹ ನೀಡುತ್ತಿದ್ದು, ಪವರ ಟಿಲ್ಲರ, ತಂತಿ ಬೇಲಿ ನಿರ್ಮಾಣ ಹಾಗೂ ಇತರೆ ಉಪಕರಣಗಳ‌ ಸಂಬಂಧಿತ ಸಾಲವನ್ನು ನೀಡುತ್ತಿದ್ದೇವೆ. ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಕುರಿ ಮತ್ತು ಜೇನು ಸಾಗಾಣಿಕೆ ಮಾಡಲು ಸಹ ಬಡ್ಡಿ ರಹಿತ ಸಾಲ ಹಾಗೂ ಸಹಾಯ ಧನವನ್ನು ನೀಡುತ್ತಿದ್ದೇವೆ. ಈ ಸಾಲಗಳ ಪಡೆಯಲು ಸಂಬಂಧಪಟ್ಟ ದಾಖಲೆಯನ್ನು ನೀಡಿದಲ್ಲಿ ಗ್ರಾಮೀಣ ಸೊಸೈಟಿಯಿಂದ ಸಾಲ ನೀಡುವಂತೆ ತಿಳಿಸಲಿದ್ದೇವೆ. ಇದರ ಜೊತೆಗೆ ಬೆಳೆ‌ ವಿಮೆಯನ್ನು ಸಹ ಬ್ಯಾಂಕ್ ಮೂಲಕ ರೈತರ ಅನೂಕೂಲಕ್ಕೆ ಮಾಡಿಕೊಡುತ್ತಿದ್ದೇವೆ. ಕೇಂದ್ರ ಸರಕಾರದಿಂದ ಸಾಕಷ್ಟು ಯೋಜನೆ ಹಾಗೂ ಸಾಲ‌ಸೌಲಭ್ಯಗಳು ಸಿಗಲಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕಿದೆ‌ ಎಂದರು.

ಈ ಸಂಧರ್ಭದಲ್ಲಿ ಬ್ಯಾಂಕನ ಶಾಖಾ ಸಹಾಯಕ ವ್ಯವಸ್ಥಾಪಕ ಎಸ್. ಎಮ್. ನಾಯ್ಕ, ಬ್ಯಾಂಕನ ಸಿಬ್ಬಂದಿಗಳು ಇದ್ದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಗ್ರಾಹಕರು ಹಾಗೂ ಮಹಿಳಾ ಸಂಘದ ಸದಸ್ಯರು, ರೈತರು ಪಾಲ್ಗೊಂಡಿದ್ದು ಮಾಹಿತಿ ಪಡೆದುಕೊಂಡರು.