ಬೆಂಗಳೂರು ಅತ್ತಿಬೆಲೆ ಪಟಾಕಿ ಅಂಗಡಿ ಬೆಂಕಿ ದುರಂತ-ಭಟ್ಕಳ ತಹಸೀಲ್ದಾರರಿಂದ ಪಟಾಕಿ ಮಾರಾಟದ ಅಂಗಡಿಗಳ ಮೇಲೆ‌ ದಾಳಿ

ಭಟ್ಕಳ: ಜಿಲ್ಲಾಢಳಿತ ಆದೇಶದ ಮೇರೆಗೆ ಭಟ್ಕಳದ ತಹಸೀಲ್ದಾರ ನೇತ್ರತ್ವದ ತಂಡವು ಪಟ್ಟಣದ ಪಟಾಕಿ ಮಾರಾಟ ಮಾಡುವ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದರು.

ಅತ್ತಿಬೆಲೆ ಪಟಾಕಿ ದುರಂತದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ರಾಜ್ಯಾದ್ಯಂತ ಪಟಾಕಿ ಲೈಸೆನ್ಸ್‌ದಾರರ ಸ್ಥಳ ಪರಿಶೀಲನೆ ನಡೆಸಿ, ಲೋಪಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ಖಡಕ್ ಸೂಚನೆ ನೀಡಿದ್ದ ಬೆನ್ನಲ್ಲೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಆಯಾ ಜಿಲ್ಲಾಧಿಕಾರಿಗಳಿಗೆ ಪಟಾಕಿ ಮಾರಾಟ ಮಳಿಗೆ ಮತ್ತು ಗೋದಾಮು ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರು.
ಅದರಂತೆ ತಹಸೀಲ್ದಾರ ಎ. ತಿಪ್ಪೇಸ್ವಾಮಿ ನೇತ್ರತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಭಟ್ಕಳ ಶಹರ ಠಾಣೆ ಪಿಎಸ್‌ಐ ಶಿವಾನಂದ,
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಪಟ್ಟಣದ ನಾನಾ ಕಡೆ ಪಟಾಕಿ ಮಾರಾಟ ಮಾಡುವ ಅಂಗಡಿಗಳು ಹಾಗೂ ಗೋದಾಮುಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಸಂಶುದ್ದೀನ ಸರ್ಕಲ್, ಹಳೆ ಬಸ್ ನಿಲ್ದಾಣ, ಪೇಟೆ ಮುಖ್ಯ ರಸ್ತೆ, ಮಾರಿಗುಡಿ, ಹೂವಿನ ಪೇಟೆ ಹಾಗೂ ಕಳಿ ಹನುಮಂತ ದೇವಸ್ಥಾದ ಸಮೀಪದ ಒಟ್ಟು 8-10 ಪಟಾಕಿ ಮಾರಾಟ ಮಾಡುವ ಅಂಗಡಿ, ಜನರಲ್ ಸ್ಟೋರ್ಸ್, ಕಿರಾಣಿ ಅಂಗಡಿಗಳಿಗೆ ಕುದ್ದು ತಹಸೀಲ್ದಾರ ತೆರಳಿದರು. ಈ ವೇಳೆ ಅಂಗಡಿಕಾರರಿಂದ ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಲು ಅವಕಾಶವಿಲ್ಲ. ಒಂದಾನು ವೇಳೆ ಮಾರಾಟ ಮಾಡಿದಲ್ಲಿ ಅದು ಅಪರಾಧವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ದಾಳಿಯ ವೇಳೆ ಒಂದು ಲೈಸೆನ್ಸ್ ಪಡೆದ ಅಂಗಡಿ ಮಳಿಗೆಯಲ್ಲಿ ಸ್ಪಾರ್ಕಲ್ (ಸುರಸುರಬತ್ತಿ) ಪ್ಯಾಕ್ ಪತ್ತೆಯಾಗಿದ್ದು ಅವರಿಗೆ ಪುರಸಭೆಯಿಂದ 500 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಹಸೀಲ್ದಾರ ಎ. ತಿಪ್ಪೇಸ್ವಾಮಿ ‘ ಪಟಾಕಿ ಮಾರಾಟಕ್ಕೂ ಪೂರ್ವದಲ್ಲಿ ಅಧಿಕೃತ ಪರವಾನಿಗೆ ಪಡೆದು ಮಾರಾಟಕ್ಕೆ ಅವಕಾಶವಿದೆ. ಅನಧಿಕೃತವಾಗಿ ಸಂಗ್ರಹ ಮಾರಾಟ ಅಪರಾಧ ಎಂಬ ಸರಕಾರದ ಆದೇಶದ ಮೇರೆಗೆ ಪರವಾನಿಗೆ ಇರುವ ಎರಡು ಪಟಾಕಿ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದೇವೆ. ಅಂಗಡಿಕಾರರು ತಿಳಿಸಿದಂತೆ ಭಟ್ಕಳದಲ್ಲಿ ದೀಪಾವಳಿ ಮತ್ತು ತುಳಸಿ ಹಬ್ಬ ಹೊರತಾಗಿ ಬೇರೆ ಸಮಯದಲ್ಲಿ ಪಟಾಕಿ ಮಾರಾಟ ಮಾಡುತ್ತಿಲ್ಲ. ಅದು ಸಹ ಜನ ನಿಭಿಡ ಇಲ್ಲದ ಪ್ರದೇಶದಲ್ಲಿ ಶೆಡ್ ನಿರ್ಮಿಸಿ ಮಾರಾಟ ಮಾಡಲಿದ್ದೇವೆ. ಯಾವೊಬ್ಬರು ಸಹ ಕಿರಾಣಿ‌ ಅಂಗಡಿಯಲ್ಲಿ ಮಾರಬಾರದು ಎಂದು ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಭಟ್ಕಳ ಶಹರ ಠಾಣೆ ಪಿಎಸ್‌ಐ ಶಿವಾನಂದ,
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ, ಪುರಸಭೆ ಆರೋಗ್ಯ ಅಧಿಕಾರಿ ಸುಜಿಯಾ ಸೋಮನ್ ಮುಂತಾದ ಇಲಾಖೆಯ ಸಿಬ್ಬಂದಿಗಳು ಇದ್ದರು.