ಹೊನ್ನಾವರ: ಸುಲಭವಾದ ಕಾಯಿಲೆಗೆ ಸುಲಭವಾದ ಔಷಧಿ ನೀಡಿ ರೋಗಿಗಳಿಗೆ ಧೈರ್ಯ ತುಂಬಿ ಕಾಳಜಿ ವಹಿಸುವ ಸ್ನೇಹಮಯಿ ಡಾ. ಯು.ಎ. ಅವಧಾನಿಯಾಗಿದ್ದರು ಎಂದು ಡಾ. ಎಸ್. ಡಿ.ಹೆಗಡೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಆಶ್ರಯದಲ್ಲಿ ಪರಿಷತ್ತಿನ ಕಚೇರಿಯಲ್ಲಿ ಆಯೋಜಿಸಿದ ಡಾ.ಯು.ಕೆ. ಅವಧಾನಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋರೋನಾ ಕಾಲಘಟ್ಟದಲ್ಲಿಯೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಕಣ್ಣಿನ ತಜ್ಞರಾದ ಅವಧಾನಿಯವರು ರೋಗಿಗಳಿಗೆ ಧೈರ್ಯ ತುಂಬಿ ಕಾಯಿಲೆ ವಾಸಿ ಮಾಡಿದ್ದರು ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಸಾಮಾನ್ಯ ಜನರ ಸೇವೆಗಾಗಿ ತಮ್ಮ ಅಮೂಲ್ಯ ಸೇವೆಯನ್ನು ಮೀಸಲಾಗಿಟ್ಟು ಹಣ ಗಳಿಸುವ ಮಾರ್ಗಕ್ಕೆ ವಿರುದ್ಧವಾಗಿ ನಡೆದು ಬಡವರ ಪಾಲಿನ ಆಸ್ತಿಯಂತಾಗಿದ್ದವರು ಡಾ. ಅವಧಾನಿಯವರು. ತಮ್ಮ ಹೃದಯ ವೈಶಾಲ್ಯತೆಯ ಮೂಲಕ ಜನರ ಕಣ್ಣಿಗೆ ಕಾಣುವ ದೇವರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು. ಜನರ ಕಲ್ಯಾಣ ಮತ್ತು ಜಗದ ಉದ್ದಾರಕ್ಕಾಗಿ ತಮ್ಮ ಅಮೂಲ್ಯ ಬದುಕನ್ನು ಮುಡುಪಾಗಿಟ್ಟು ಸೇವೆಯೇ ಧರ್ಮವೆಂದು ಸೇವಾ ಕಾರ್ಯದ ಮೂಲಕ ತಮ್ಮ ವೃತ್ತಿ ಬದುಕನ್ನು ಪವಿತ್ರ ಗೊಳಿಸಿದ್ದ ಅವಧಾನಿಯವರು ಇಡೀ ಮನುಕುಲಕ್ಕೆ ಅವರ ಸೇವೆ ಮಾದರಿಯಾದದ್ದು ಎಂದರು. ಪರಿಷತ್ತಿನ ಘಟಕದ ಅಧ್ಯಕ್ಷ ಎಸ್. ಎಚ್. ಗೌಡ ಮಾತನಾಡಿ, ವೈದ್ಯ ಸಂಘವು ನಿಗದಿ ಪಡಿಸುವ ಹೆಚ್ಚಿನ ಶುಲ್ಕವನ್ನು ತಿರಸ್ಕರಿಸಿ, ತನ್ನ ಹತ್ತಿರ ಬರುವ ಬಡ ರೋಗಿಗಳಿಗೆ ಆರ್ಥಿಕ ಸಹಾಯ ನೀಡಿ ಉಪಚರಿಸುತ್ತಿದ್ದ ಅಪರೂಪದ ವೈದ್ಯರಾಗಿದ್ದರು ಎಂದರು.
ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್.ಎಂ. ಮಾರುತಿ ಮಾತನಾಡಿ, ಬಹುಕಾಲದಿಂದ ನಡೆದು ಬಂದಿರುವ ಜನಪರ ವೈದ್ಯ ಪರಂಪರೆ ಸೇವೆಯನ್ನು ಮುಂದುವರಿಸಿ, ಅದನ್ನು ಉಳಿಸಿ ಬೆಳೆಸುವ ಕಾರ್ಯ ಹಾಗೂ ಸೇವಾ ಮನೋಭಾವನೆಯಿಂದ ದುಡಿದಿರುತ್ತಾರೆ. ವೈದ್ಯರನ್ನು ದೇವರೆಂದೇ ನಂಬುವ ಸಾಮಾನ್ಯ ಜನರ ಬದುಕಿನಲ್ಲಿ ಸದಾ ನೆನಪುಳಿಯುವ ಸೇವೆ ಡಾ.ಯು.ಕೆ.ಅವಧಾನಿಯವರಿಂದ ಅಗಿದೆ ಎಂದರು.ಪರಿಷತ್ತಿನ ಗೌರವ ಕೋಶಾಧ್ಯಕ್ಷ ನಾರಾಯಣ ಹೆಗಡೆ ಮತ್ತು ಸದಸ್ಯರಾದ ಮಾಸ್ತಿಗೌಡ ನುಡಿ ನಮನ ಸಲ್ಲಿಸಿದರು.