ಯೋಜನಾ ನಿರಾಶ್ರಿತರ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಅಂಕೋಲಾ ತಾಲೂಕು ಯೋಜನಾ ನಿರಾಶ್ರಿತರ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ: ಸಂಘದ ಸಾಂಕೇತಿಕ ಉದ್ಘಾಟನೆ.
ಅಂಕೋಲಾ: ಬೇಲೇಕೇರಿ ಭಾವಿಕೇರಿ ಹಟ್ಟಿಕೇರಿ ಮತ್ತು ಅಲಗೇರಿ ಪಂಚಾಯಿತಿಗಳ, ಅಂಕೋಲಾ ತಾಲೂಕು ಯೋಜನಾ ನಿರಾಶ್ರಿತರ ಸಂಘದ ವತಿಯಿಂದ ಅಂಕೋಲಾದ ಹಟ್ಟಿಕೇರಿಯ ಐ ಆರ್ ಬಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ರವಿವಾರ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.
ಗಾಂಧಿ ಜಯಂತಿಯ ಅಂಗವಾಗಿ ಮತ್ತು ಅಂಕೋಲಾ ತಾಲೂಕು ಯೋಜನೆ ನಿರಾಶ್ರಿತರ ಸಂಘದ ಸಾಂಕೇತಿಕ ಉದ್ಘಾಟನೆಯ ಪ್ರಯುಕ್ತವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 3 ಗಂಟೆಗಳಿಗೂ ಅಧಿಕಕಾಲ ನೂರಾರು ಜನರು ಭಾಗವಹಿಸಿದ್ದರು.
ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಂಕೋಲಾ ತಾಲೂಕು ಯೋಜನಾ ನಿರಾಶ್ರಿತರ ಸಂಘದ ಅಧ್ಯಕ್ಷ ಕೆ ಆರ್ ನಾಯಕ ಮಾತನಾಡಿ, ರಾಷ್ಟ್ರೀಯ ಯೋಜನೆಯಿಂದ ನಿರಾಶ್ರಿತವಾಗಿರುವ ಜನರ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಂಘಿಕ ಹೋರಾಟ ಅಗತ್ಯವಾಗಿದೆ. ಇದು ವೈಯಕ್ತಿಕ ಸಂಘಟನೆಯಾಗದೆ, ಜಾತಿ ಮತ ಪಂಥ ಬೇಧವಿಲ್ಲದೆ ತಾಲೂಕಿನ ಎಲ್ಲಾ ನಿರಾಶ್ರಿತರನ್ನು ಸಮಾನಮನಸ್ಕಾರಾಗಿ ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಕೇವಲ ಬೇಡಿಕೆಗಳಿಗೆ ಆಗ್ರಹಿಸದೆ ಸಮಾಜಕ್ಕೆ ಅವಶ್ಯಕವಾಗಿರುವ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾಗೋಣ. ತಿಂಗಳಿಗೆ ಒಂದು ಬಾರಿ ಈ ರೀತಿಯ ಬೃಹತ್ ಸ್ವಚ್ಛತಾ ಆಂದೋಲನವನ್ನು ನಡೆಸಲಾಗುವುದು ಎಂದರು. ಸಂಘದ ಗೌರವಾಧ್ಯಕ್ಷ ಉದಯ ವಾಮನ ನಾಯಕ ಮಾತನಾಡಿ, ಸೀಬರ್ಡ್ ನೌಕಾನೆಲೆ ನಾಗರಿಕ ವಿಮಾನ ನಿಲ್ದಾಣ ಯೋಜನೆಗಳಲ್ಲಿ ನಿರಾಶ್ರಿತರಾದವರು ಇಂದಿಗೂ ಸುರಕ್ಷಿತ ಜೀವನ ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. 30 ವರ್ಷ ಕಳೆದರೂ ನಿರಾಶ್ರಿತರ ಕನಿಷ್ಠ ಬೇಡಿಕೆಗಳು ಈಡೇರಿಲ್ಲ ಮತ್ತು ಉದ್ಯೋಗ ಅವಕಾಶ ಲಭ್ಯವಾಗಿಲ್ಲ. ಹಾಗಾಗಿ ನಾಲ್ಕು ಪಂಚಾಯಿತಿಗಳ ನಿರಾಶ್ರಿತರು ಸಮಾನಮನಸ್ಕಾರಾಗಿ ಒಂದೆಡೆ ಬೆರೆತು ಹಕ್ಕುಗಳಿಗಾಗಿ ಹೋರಾಟ ಮಾಡಲು ಸಂಘವು ಅಸ್ತಿತ್ವಕ್ಕೆ ಬಂದಿದೆ ಎಂದರು.
ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಕಮಿಷನ್ ಮೇಲ್ವಿಚಾರಕ ಮತ್ತು ಸಮಾಲೋಚಕ ಗಣೇಶ ಗಾಂವಕರ ಮಾತನಾಡಿ, ಸ್ವಚ್ಛತೆಯ ಮೂಲಕ ರೋಗಗಳು ಹರಡದಂತೆ ನೋಡಿಕೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡೋಣ ಎಂದರು.
ಹಟ್ಟಿಕೇರಿ ಟೋಲ್ ಗೇಟ್ ನಿಂದ ಆರಂಭಗೊಂಡು ಐಎನ್ಎಸ್ ವಜ್ರಕೋಶದ ಮಹಾದ್ವಾರದವರೆಗೆ ಸ್ವಚ್ಛತೆ ಮಾಡಲಾಯಿತು. ಕಸವನ್ನು ವಿಂಗಡಣೆ ಮಾಡಿ ವಿಲೇವಾರಿಗೆ ನೀಡಲಾಯಿತು. ನಾಲ್ಕು ಪಂಚಾಯಿತಿ ವ್ಯಾಪ್ತಿಯ ನೂರಾರು ನಿರಾಶ್ರಿತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಂಘದ ಉಪಾಧ್ಯಕ್ಷ ವಿಕ್ರಂ ಪಂತ್, ಕಾರ್ಯದರ್ಶಿ ಗೌರೀಶ ಗೌಡ, ಹಟ್ಟಿಕೇರಿಯ ಐ ಆರ್ ಬಿ ಟೋಲ್ ಗೇಟ್ ವ್ಯವಸ್ಥಾಪಕ ಸುಭಾಸ್ ಲೋಹರ್ ನಿರಾಶ್ರಿತ ಪ್ರಮುಖರು, ಹಿರಿಯರು, ಸಂಘದ ಸದಸ್ಯರು ಐಆರ್‌ಬಿ ಸಿಬ್ಬಂದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.