ಅಂಕೋಲಾ : ನಮ್ಮ ಸುತ್ತಲಿನ ಪರಿಸರ ಸಮತೋಲನದಲ್ಲಿರಲು ಅಗತ್ಯವಿರುವ ವನ್ಯ ಜೀವಿಗಳಿಗೆ ಮನುಷ್ಯನಷ್ಟೇ ಜೀವಿಸುವ ಹಕ್ಕಿದೆ ಎಂದು ವಲಯ ಅರಣ್ಯಾಧಿಕಾರಿ ಜಿ ವಿ ನಾಯಕ ಹೇಳಿದರು. ಅವರು ಅರಣ್ಯ ಇಲಾಖೆ ಕಾರವಾರ ವಿಭಾಗ, ಅಂಕೋಲಾ ಉಪ ವಿಭಾಗ ಮತ್ತು ಗೋಖಲೆ ಸೆಂಟಿನರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎನ್ ಎಸ್ ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಿ ಸಿ ಕಾಲೇಜಿನಲ್ಲಿ ಆಯೋಜಿಸಿದ 69 ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿ ಮನುಷ್ಯರ ಅತಿ ಆಸೆ ಮತ್ತು ಪ್ರಮಾದಗಳಿಂದ ಇಂದು ವನ್ಯ ಜೀವಿಸಂಕುಲ ಸಂಕಷ್ಟದ ಸುಳಿಗಳಲ್ಲಿ ಸಿಲುಕಿದೆ. ಇದರಿಂದ ನಮ್ಮ ನೈಸರ್ಗಿಕ ಸಂಪತ್ತಿಗೆ ಬಹಳಷ್ಟು ಹಾನಿ ಆಗುತ್ತಿದೆ. ವನ್ಯ ಪ್ರಾಣಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ತರವಾದ ಪ್ರಯತ್ನಗಳನ್ನು ನಾವು ಮಾಡಲೇ ಬೇಕಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಇಂದು ಅರಣ್ಯ ಪ್ರದೇಶಗಳು ಹಾಗೂ ವನ್ಯಜೀವಿಗಳ ಆವಾಸಸ್ಥಾನ ವಿಪರೀತ ವೇಗದಲ್ಲಿ ಕುಗ್ಗುತ್ತಿದೆ. ಹೀಗಾಗಿ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತವೆ. ಇದರಿಂದ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಮನುಷ್ಯನ ಹಾಗೆಯೇ ಭೂಮಿಯ ಮೇಲೆ ಬದುಕಲು ಎಲ್ಲಾ ಜೀವರಾಶಿಗಳಿಗೂ ಸಮಾನ ಹಕ್ಕಿದೆ.
ವನ್ಯಜೀವಿ ಮತ್ತು ಪ್ರಾಕೃತಿಕ ಸಂರಕ್ಷಣೆಗಾಗಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಸಂದೇಶ ನೀಡಿದ್ದಾರೆ. ಅವರ ಜನ್ಮದಿನದ ನೆನಪಿಗಾಗಿ ಅರಣ್ಯ ಇಲಾಖೆಯು ಅ.2ರಿಂದ ಒಂದು ವಾರಗಳ ಕಾಲ ಸಪ್ತಾಹದ ರೂಪದಲ್ಲಿ ಆಚರಿಸುವ ಮೂಲಕ ವನ್ಯಜೀವಿಗಳು ಮತ್ತು ಜೈವಿಕ ವೈವಿಧ್ಯತೆಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು. ಅರಣ್ಯ ಇಲಾಖೆಯ ವತಿಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಬಸನಗೌಡ ಬಗಲಿ ವನ್ಯ ಜೀವಿಗಳ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಿ ಪರಿಸರದಲ್ಲಿನ ಅನೇಕ ಪ್ರಾಣಿ ಪಕ್ಕಿಗಳ ಕುರಿತು ಡಿಜಿಟಲ್ ಪರದೆಯ ಮೂಲಕ ವಿವರಿಸಿದರು. ಜಿ ಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್ ವಿ ವಸ್ತ್ರದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ. ಆರ್ ಪಿ ಭಟ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ, ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.