ಗಾಂಧೀ ಮಂದಿರದಲ್ಲಿ ಕಾಂಗ್ರೆಸ್ ವತಿಯಿಂದ ಗಾಂಧೀ ಜಯಂತಿ ಆಚರಣೆ.

ಅಂಕೋಲಾ : ಇಲ್ಲಿನ ಭಾಸಗೋಡದಲ್ಲಿರುವ ಗಾಂಧೀ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಷ್ಟ್ರಪಿತ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರು ಈ ಸ್ಥಳಕ್ಕೆ ಆಗಮಿಸಿದ ನೆನಪಿಗೋಸ್ಕರ ದಿ. ರಾಮಾ ನಾಯಕ ಅವರು ನಿರ್ಮಿಸಿದ ಗಾಂಧೀ ಪ್ರತಿಮೆಯ ಮಂದಿರದ ಬಳಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ನಂತರ ಗಾಂಧೀ ಪ್ರತಿಮೆಗೆ ಮಾಲಾರ್ಪಣೆಗೈದು ವಂದೇ ಮಾತರಂ ಮತ್ತು ರಘುಪತಿ ರಾಘವ ರಾಜಾರಾಮ ಗೀತೆಯನ್ನು ಹಾಡಿದರು. ಬಳಿಕ ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಪಡುರಂಗ ಗೌಡ ಮಾತನಾಡಿ ಗಾಂಧೀಜಿಯವರು ಸತ್ಯ ಅಹಿಂಸೆಯ ತತ್ವವನ್ನು ಇಡೀ ದೇಶಕ್ಕೆ ಸಾರಿದರು. ವರ್ಣ ಬೇಧ‌ನೀತಿಯಿಂದ ಹಿಡಿದು ಭಾರತ ಸ್ವಾತಂತ್ರ್ಯ ಪಡೆಯುವವರೆಗಿನ ಅವರ ಹೋರಾಟ ಮತ್ತು ತ್ಯಾಗ ಅವಿಸ್ಮರಣೀಯ. ಬ್ಇಟೀಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಹೋರಾಟದ ಒಂದು ಭಾಗವಾಗಿ ಉಪ್ಪಿನ ಸತ್ಯಗ್ರಹ ನಡೆಸಲು ಅಂಕೋಲೆಗೆ ಆಗಮಿಸಿ ಇಲ್ಲಿನ ಸತ್ಯಾಗ್ರಹಿಗಳಿಗೆ ಬೆಂಬಲ ನೀಡಿದ್ದು ಮರೆಯಲಾಗದ ಸಂಗತಿ. ಲಾಲ ಬಹಾದ್ದೂರ ಶಾಸ್ತ್ರೀಜಿಯವರ ಕೊಡುಗೆಯೂ ಈ ದೇಶಕ್ಕೆ ಅಪಾರವಾಗಿದೆ. ಸ್ವಾತಂತ್ರ್ಯ ಹೋರಾಟದ ಪುಣ್ಯ ನೆಲದಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಲು ಹೆಮ್ಮೆಯಾಗುತ್ತದೆ ಎಂದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನನ್ನೇ ತಾನು ಪಣಕ್ಕಿಟ್ಟು ಸತ್ಯ, ಅಹಿಂಸೆ ಮತ್ತು ನ್ಯಾಯಯುತವಾಗಿ ಬ್ರಿಟೀಷರ ಕಪಿಮುಷ್ಠಿಯಿಂದ ಭಾರತಾಂಬೆಯನ್ನು ಬಿಡಿಸಿಕೊಟ್ಟ ಗಾಂಧೀಜಿಯವರು ಎಂದಿಗೂ ಅಜರಾಮರ. ಪ್ರಸ್ತುತ ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಇವುಗಳಿಗೆಲ್ಲ ಕಡಿವಾಣ ಹಾಕಿ ಗಾಂಧೀಜಿಯವರ ಕನಸಿನ ಭಾರತ ನಿರ್ಮಾಣವಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ವಿನೋದ ನಾಯಕ ಭಾಸಗೋಡ, ದೀಪಾ ಆಗೇರ, ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ ಡಿ ನಾಯ್ಕ, ಶಾಂತಿ ಆಗೇರ, ಶೆಟಗೇರಿ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀಧರ ನಾಯಕ, ಪ್ರಚಾರ ಸಮಿತಿ ಅಧ್ಯಕ್ಷ ಮಂಜೇಶ್ವರ ನಾಯಕ, ಪ್ರಮುಖರಾದ ಭೈರವಡಿ ನಾಯ್ಕ, ವಿಜಯ ಪಿಳ್ಳೈ, ಜಗದೀಶ ಖಾರ್ವಿ ಸತೀಶ ನಾಯ್ಕ, ಮೀನುಗಾರ ಮುಖಂಡ ರಾಜು ಹರಿಕಂತ್ರ, ಮಂಜುನಾಥ ವಿ ನಾಯ್ಕ, ಹೊನ್ನಪ್ಪ, ಸುರೇಶ, ಮಂಜುಳಾ ವೆರ್ಣೇಕರ, ಲಲಿತಾ ಕಲ್ಮನೆ, ಇನ್ನಿತರರು ಉಪಸ್ಥಿತರಿದ್ದರು.