ಗಾಂಧೀ ಜಯಂತಿ ಪ್ರಯುಕ್ತ ಸಾರಾಯಿ ಮಾರಾಟ ವಿರೋಧೀ ಕರಪತ್ರ ಹಂಚಿಕೆ.

ಅಂಕೋಲಾ : ತಾಲೂಕಿನ ಸಾಮಾಜಿಕ ಕಾರ್ಯಕರ್ತ ನ್ಯಾಯವಾದಿ ಉಮೇಶ ನಾಯ್ಕ ಬೆಳಂಬಾರದಲ್ಲಿ ಕುಡಿತದ ಚಟದಿಂದಾಗುವ ಹಾನಿಗಳನ್ನು ತಿಳಿಸುವ ಸಾರಾಯಿ ಮಾರಾಟ ವಿರೋಧೀ ಜಾಗೃತಿಗಾಗಿ ಕರಪತ್ರ ಹಂಚುವದರ ಮೂಲಕ ಗಾಂಧೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಬೆಳಂಬಾರದ ಪ್ರಸಿದ್ಧ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರದ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ನಾಟೀ ವೈದ್ಯ ಹನುಮಂತ ಗೌಡ ಕರಪತ್ರವನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಕಳೆದ 17 ವರ್ಷಗಳಿಂದ ಉಮೇಶ ನಾಯ್ಕ ಈ ಕಾರ್ಯವನ್ನು ನಡೆಸುತ್ತ ಬಂದಿದ್ದಾರೆ. ಇಂತಹ ಜಾಗೃತಿಯಿಂದಾಗಿ ಬೆಳಂಬಾರ ಗ್ರಾಮದಲ್ಲಿ ಬಹುತೇಕ ಸಾರಾಯಿ ಮಾರಾಟ ನಿಷೇಧವಾಗಿದೆ. ಇದರಿಂದ ದಾರಿ ತಪ್ಪುತ್ತಿದ್ದ ಯುವ ಜನಾಂಗ ಒಳ್ಳೆಯ ಮಾರ್ಗದಲ್ಲಿ ನಡೆಯುವಂತಾಗಿದೆ ಎಂದರು. ಉಮೇಶ ನಾಯ್ಕ ಮಾತನಾಡಿ ಸಾರಾಯಿ ಕುಡಿಯುವದರಿಂದ ಆರೋಗ್ಯಕ್ಕೂ ಮಾರಕ, ಕುಟುಂಬದ ನೆಮ್ಮದಿಗೂ ಮಾರಕ ಅಷ್ಟೇ ಅಲ್ಲದೆ ಊರಿನ ಅಭಿವೃದ್ಧಿಗೂ ತೊಡಕಾಗುತ್ತದೆ. ಪ್ರತಿಯೊಂದು ಗ್ರಾಮದಲ್ಲೂ ಇಂತಹ ಜಾಗೃತಿ ಮೂಡಿ ಸಾರಾಯಿ ಮಾರಾಟ ಸಂಪೂರ್ಣ ಬಂದ್ ಆಗಬೇಕು ಬಡ ಮದ್ಯಮ ಕುಟುಂಬಗಳು ನೆಮ್ಮದಿಯಿಂದ ಬದುಕಬೇಕು ಎಂದರು. ಆದಾಯದ ಆಸೆಗಾಗಿ ಸರಕಾರ ಪ್ರತೀ ಹಳ್ಳಿಯಲ್ಲೂ ಸಾರಾಯಿ ಮಾರಾಟ ಮಳಿಗೆ ತೆರೆಯಲು ಯೋಜಿಸಿರುವದನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಚಿಕಿತ್ಸಾ ಕೇಂದ್ರದಲ್ಲಿರುವ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವವರು, ಸ್ಥಳೀಯರು ಉಪಸ್ಥಿತರಿದ್ದರು. ನಂತರ ಗ್ರಾಮದ ವಿವಿಧ ಭಾಗಗಳಲ್ಲಿ ಕರಪತ್ರಗಳನ್ನು ಹಂಚಿದರು.