ದಾಂಡೇಲಿ ಮೂಲದ ವ್ಯಕ್ತಿಯೊಬ್ಬ ಹುಬ್ಬಳ್ಳಿಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನಪ್ಪಿದ್ದು ಅಂತ್ಯಸಂಸ್ಕಾರಕ್ಕೆ ತಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ
ಮೃತಪಟ್ಟ ವ್ಯಕ್ತಿಯ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ದಾಂಡೇಲಿ ನಗರದ ಜೆ.ಎನ್ ರಸ್ತೆಯಲ್ಲಿರುವ ಮೃತನ ತಮ್ಮನ ಮನೆಗೆ ಹುಬ್ಬಳ್ಳಿಯಿಂದ ಆಂಬುಲೆನ್ಸ್ ಮೂಲಕ ಭಾನುವಾರ ಕಳುಹಿಸಿಕೊಡಲಾಗಿತ್ತು. ಆದರೆ ಮೃತ ದೇಹದ ಹಣೆಯ ಮೇಲೆ ಗಾಯದ ಗುರುತು ಇದ್ದ ಹಿನ್ನೆಲೆಯಲ್ಲಿ ಮತ್ತು ಮೃತ ದೇಹದ ಜೊತೆ ಮೃತನ ಪತ್ನಿ ಬರದೇ ಇರುವುದರಿಂದ ಅನುಮಾನಗೊಂಡ ಕುಟುಂಬಸ್ಥರು, ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ದಾಂಡೇಲಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಇಂದು ಭಾನುವಾರ ನಡೆದಿದೆ.
ಅಬ್ದುಲ್ ರೆಹಮಾನ್ ಎಂಬಾತನೇ ಅನುಮಾನಸ್ಪದವಾಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಮೃತನಿಗೆ 50 ವರ್ಷ ವಯಸ್ಸಾಗಿದ್ದು , ಈತನು ಪತ್ನಿ ಜೈನಬ್ ಹಾಗೂ ಎರಡು ಮಕ್ಕಳೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಿದ್ದನು. ಮೃತ ಅಬ್ದುಲ್ ರೆಹಮಾನ್ ಕುಟುಂಬಸ್ಥರು ಅಂತ್ಯಕ್ರಿಯೆಗೆ ಮುಂದಾಗಿದ್ದ ಸಂದರ್ಭದಲ್ಲಿ ಮೃತ ದೇಹದ ಹಣೆಯ ಮೇಲೆ ಗಾಯವಾಗಿರುವುದು ಗಮನಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಜಮಾಯಿಸಿದ್ದು, ಇದು ಅಸಹಜ ಸಾವು, ಕೊಲೆ ಮಾಡಿರುವ ಶಂಕೆ ಕಂಡುಬರುತ್ತಿದೆ ಎಂಬ ಆಕ್ರೋಶ ಸ್ಥಳದಲ್ಲಿ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಮೃತ ಅಬ್ದುಲ್ ರೆಹಮಾನಿನ ಪತ್ನಿಯ ಕುಟುಂಬಸ್ಥರು ಮೃತನ ಕುಟುಂಬಸ್ಥರೊಂದಿಗೆ ಹಾಗೂ ಸ್ಥಳೀಯರೊಂದಿಗೆ ದರ್ಪದಿಂದ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಂತ್ಯಸಂಸ್ಕಾರಕ್ಕೆ ಅಣಿಗೊಳಿಸಲಾಗಿದ್ದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಮೃತನ ಪತ್ನಿಯ ಕುಟುಂಬಸ್ಥರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಡಿವೈಎಸ್ಪಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಭೀಮಣ್ಣ ಎಂ ಸೂರಿ ಮತ್ತು ಪಿಎಸ್ಐ ಯಲ್ಲಪ್ಪ ಅವರು ಸೇರಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.