ಜೋಯಿಡಾ : ತಾಲ್ಲೂಕಿನ ಕುಂಬಾರವಾಡದಲ್ಲಿ ನೂತನವಾಗಿ ನಿರ್ಮಾಣಗೊಂಡ ತೆಂಗಿನ ನಾರಿನ ಉತ್ಪಾದನಾ ಘಟಕದ ಉದ್ಘಾಟನೆ ಮತ್ತು ಕುಂಬಾರವಾಡದ ಕ್ಷೇತ್ರಪಾಲ ಸಭಾಭವನದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಇಂದು ಗುರುವಾರ ಶಾಸಕ ಆರ್.ವಿ.ದೇಶಪಾಂಡೆ ಅವರು ಭಾಗವಹಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್ ವಿ ದೇಶಪಾಂಡೆ ಅವರು ಜೋಯಿಡಾ ತಾಲೂಕು ಕೇವಲ ದಟ್ಟ ಪರಿಸರಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ, ಇಲ್ಲಿಯ ಜೀವ ವೈವಿಧ್ಯತೆ ಹಾಗೂ ವನ್ಯಪ್ರಾಣಿಗಳ ಸ್ವಚ್ಛಂದ ಬದುಕಿನ ಮೂಲಕ ಜೋಯಿಡಾ ತಾಲೂಕು ವಿಶ್ವಖ್ಯಾತಿಯನ್ನು ಪಡೆದಿದೆ. ಎಲ್ಲಿಯ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯ ವಿಚಾರದಲ್ಲಿ ಇಲಾಖೆಯ ಜೊತೆಗೆ ತಾಲೂಕಿನ ಜನತೆ ಕೈಜೋಡಿಸಿದ ಪರಿಣಾಮವಾಗಿ ಸಮೃದ್ಧ ಪರಿಸರ ಮತ್ತಷ್ಟು ಸದೃಢವಾಗಲು ಕಾರಣವಾಗಿದೆ ಎಂದರು. ಪ್ರವಾಸೋದ್ಯಮದ ಪ್ರಗತಿಗಾಗಿ ವಿಶೇಷ ಒತ್ತನ್ನು ನೀಡಿ ಹಲವು ಆಯಾಮಗಳ ಮೂಲಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರವಾಸೋದ್ಯಮ ಬೆಳೆದಂತೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತಿರುವುದು ಸಂತಸದ ಸಂಗತಿ ಎಂದರು. ಪರಿಸರ ಹಾಗೂ ವನ್ಯ ಸಂತತಿಯ ಸಂರಕ್ಷಣೆಯ ಜೊತೆಗೆ ಪ್ರವಾಸೋದ್ಯಮ ಬೆಳವಣಿಗೆಯಾಗಬೇಕು. ಇದರ ಜೊತೆಗೆ ಜನತೆಗೆ ಅವಶ್ಯ ಮೂಲಸೌಕರ್ಯವು ಒದಗಣೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ನೀಲೇಶ್ ಶಿಂಧೆ, ತಹಶೀಲ್ದಾರ್ ಶೈಲೇಶ್ ಪರಮಾನಂದ್, ಡಿವೈಎಸ್ಪಿ ಶಿವಾನಂದ ಕಟಗಿ ಮೊದಲಾದವರು ಉಪಸ್ಥಿತರಿದ್ದರು.