ಅಂಕೋಲಾ: ಪಟ್ಟಣದ ಸಮಾಜ ಮಂದಿರದ ಆವರಣದಲ್ಲಿ ಪುರಸಭೆಯ ವತಿಯಿಂದ ಸಂಭ್ರಮದಿಂದ ಪೌರ ಕಾರ್ಮಿಕ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ ಆರ್ ಸ್ವಾಮಿ, ಪೌರ ಕಾರ್ಮಿಕರು ಪುರಸಭೆಯ ಆಧಾರ ಸ್ತಂಭಗಳು. ಅವರು ಸ್ವಚ್ಛತೆಯ ವೈದ್ಯರು. ಆರೋಗ್ಯದ ಸೈನಿಕರು. ಪುರಸಭೆ ವತಿಯಿಂದ ಸುಮಾರು 13 ಜನರಿಗೆ ಶೀಘ್ರದಲ್ಲಿಯೇ ನೇಮಕಾತಿ ಆದೇಶ ದೊರೆಯುವುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಕ್ರೂಢಿಕರಣ ಮಾಡಲಾಗುತ್ತಿದೆ ಪೌರ ಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಕರೆ ನೀಡಿದರು.
ಪತ್ರಕರ್ತರ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ ಮಾತನಾಡಿ, ಸರ್ಕಾರದಿಂದ ಹೆಚ್ಚಿನ ಪ್ರಮಾಣದ ಸೌಲಭ್ಯಗಳು ಪೌರಕಾರ್ಮಿಕರಿಗೆ ದೊರೆಯಬೇಕು. ಪ್ರತಿನಿತ್ಯ ಪಟ್ಟಣದ ಸ್ವಾಸ್ತ್ಯ ಕಾಪಾಡಲು ಶ್ರಮಿಸುವ ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ನಿಯಮಿತವಾಗಿ ತಲುಪುವಂತಾಗಬೇಕು ಎಂದರು.ಪುರಸಭಾ ಸದಸ್ಯ ನಾಗರಾಜ ಐಗಳ ಮಾತನಾಡಿ, ಪೌರಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು. ಪೌರಕಾರ್ಮಿಕರ ನೈತಿಕ ಸ್ಥೈರ್ಯ ಹೆಚ್ಚಿಸಿ ಮನೋಸ್ಥೈರ್ಯ ವೃದ್ಧಿಗೆ ಜನಪ್ರತಿನಿಧಿಗಳು ಬೆಂಬಲ ನೀಡಬೇಕು. ಅವರ ಮೇಲಿನ ಹಲ್ಲೆಗಳು ಖಂಡನೀಯ ಎಂದರು.ಪುರಸಭಾ ಸದಸ್ಯ ಪ್ರಕಾಶ ಗೌಡ ಮಾತನಾಡಿ ಪೌರ ಕಾರ್ಮಿಕರ ಕೌಟುಂಬಿಕ ಜೀವನಕ್ಕೂ ಅಧಿಕಾರಿಗಳು ಮತ್ತು ಜನಪ್ರಿನಿಧಿಗಳು ಸ್ಪಂದನೆ ಮಾಡಬೇಕು.ಪೌರ ಕಾರ್ಮಿಕರಿಲ್ಲದೇ ಸ್ವಚ್ಚತೆ ಸಾಧ್ಯವಿಲ್ಲ. ನಾವು ಅವರೊಂದಿಗೆ ಇದ್ದು ಬೆಂಬಲ ನೀಡೋಣ ಎಂದರು.ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಪೌರ ಕಾರ್ಮಿಕರನ್ನು ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಸನ್ಮಾನಿಸಲಾಯಿತು.
ಪುರಸಭಾ ಸದಸ್ಯರಾದ ಕಾರ್ತಿಕ್ ನಾಯ್ಕ, ರೇಖಾ ಗಾಂವಕರ, ಮಂಜುನಾಥ ನಾಯ್ಕ, ಮಂಗೇಶ ಶೇಡಗೆರಿ, ನಿರ್ಮಲಾ ಹುಲಸ್ವಾರ, ಅಶೋಕ ಶೇಡಗೆರಿ, ಶೀಲಾ ಶೆಟ್ಟಿ, ಜಯಾ ನಾಯ್ಕ, ಹೇಮಾ ಆಗೇರ, ಶಾಂತಲಾ ನಾಡಕರ್ಣಿ, ಸುಲಕ್ಷಾ ಭೋವಿ, ಕರುಣಾ ಮಹಾಲೆ ಮತ್ತು ಪೌರ ಕಾರ್ಮಿಕ ಪ್ರತಿನಿಧಿಗಳು ವೇದಿಕೆಯಲ್ಲಿದ್ದರು ವಿನೋದ ಹುಲಸ್ವಾರ ಸ್ವಾಗತಗೀತೆ ಪ್ರಸ್ತುತ ಪಡಿಸಿದರು. ಡಿ ಎಲ್ ರಾಥೋಡ್ ಕಾರ್ಯಕ್ರಮ ನಿರ್ವಹಿಸಿದರು. ವಿಷ್ಣು ಗೌಡ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಪೌರ ಕಾರ್ಮಿಕರಿಗಾಗಿ ಮೋಜಿನ ಆಟಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪುರಸಭೆಯ ಸಿಬ್ಬಂದಿ ರಾಘು ಗೌಡ ತಮ್ಮ ಸಂಗೀತದ ಮೂಲಕ ಸಭಿಕರನ್ನು ರಂಜಿಸಿದರು.