ಹೊನ್ನಾವರ: ಪೌರ ಕಾರ್ಮಿಕರು ಪ್ರಕೃತಿಯ ಮಿತ್ರರು.ಅವರು ಮಾಡುವ ಸ್ವಚ್ಚತಾ ಕಾರ್ಯ ಬೇರೆ ಯಾರು ಮಾಡಲಾರರು.ಅವರನ್ನು ನಾವು ಗೌರವಭಾವದಿಂದ ಕಾಣಬೇಕು ಎಂದು ಹೊನ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾಯಕ್ ಅಭಿಪ್ರಾಯಪಟ್ಟರು.
ಹೊನ್ನಾವರ ಪಪಂ ಸಭಾಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ನಿಮಿತ್ತ ಪಟ್ಟಣ ಪಂಚಾಯತದ ಎಲ್ಲಾ ಪೌರಕಾರ್ಮಿಕರಿಗೆ, ಡ್ರೈವರ್, ಲೋಡರ್, ಸ್ವೀಪರ್ ಗಳಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪೌರ ಕಾರ್ಮಿಕರ ಸಮಸ್ಯೆ,ಯೋಗಕ್ಷೇಮಗಳ ಬಗ್ಗೆ ಚರ್ಚೆ ಅಗತ್ಯವಿದೆ. ಎಂದರು. ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಉಪನ್ಯಾಸಕ ಪ್ರಶಾಂತ ಹೆಗಡೆ ಮಾತನಾಡಿ, ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಬೇಕು.ನಿಮ್ಮ ದೈಹಿಕ ಶುಚಿತ್ವದ ಬಗ್ಗೆ ಗಮನಕೊಡಿ ಎಂದು ಸಲಹೆ ನೀಡಿದರು. ಮಾತನಾಡುವ ಬಾಯಿಗಿಂತ ಸೇವೆ ಮಾಡುವ ಕೈ ಶ್ರೇಷ್ಟವಾದದು ಎಂದರು.
ನಂತರ ಪೌರಕಾರ್ಮಿಕರಿಗೆ, ಡ್ರೈವರ್, ಲೋಡರ್, ಸ್ವೀಪರ್ ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೃತ್ತಿಯಲ್ಲಿ ಮೇಲು-ಕೀಳು ಎನ್ನುವುದಿಲ್ಲ.ಎಲ್ಲಾ ವೃತ್ತಿಯನ್ನು ನಾವು ಗೌರವಿಸಬೇಕು.ಪೌರ ಕಾರ್ಮಿಕರು ಕುಡಿತದ ಚಟದಿಂದ ಮುಕ್ತಿಹೊಂದಿ,ಇಲ್ಲವಾದಲ್ಲಿ ಅದು ನಿಮ್ಮ ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಉದ್ಯಮಿ ಶ್ರೀಕಾಂತ ನಾಯ್ಕ ಕಿವಿಮಾತು ಹೇಳಿದರು.ನಾಗರಿಕರು ಸಹ ಎಲ್ಲೆಂದರಲ್ಲಿ ಕಸಬಿಸಾಡದೆ ಜವಬ್ದಾರಿಯುತವಾಗಿ ವರ್ತಿಸಿ ಎಂದು ಕರೆನೀಡಿದರು.
ಪೌರ ಕಾರ್ಮಿಕರ ಸೇವೆ ಒಂದು ರೀತಿಯ ತಪಸ್ಸಿನಂತೆ.ಪಟ್ಟಣ ಪಂಚಾಯತಕ್ಕೆ ಒಳ್ಳೆಯ ಹೆಸರು ಬರಲು ಕಾರಣ ಅವರೆ.ಕರೋನಾ ಸಂದರ್ಭದಲ್ಲಿ ಪೌರ ಕಾರ್ಮಿಕರ ಸೇವೆ ಶ್ಲಾಘನೀಯವಾಗಿತ್ತು.ಅವರ ಕೆಲಸ ಎಂದು ಮರೆಯಲು ಸಾಧ್ಯವಿಲ್ಲ.ಅವರ ಕಷ್ಟಕ್ಕೆ ನಾವೆಲ್ಲಾ ಸ್ಪಂದಿಸಬೇಕು,ಜೊತೆಯಾಗಬೇಕು ಎಂದು ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ರು,ಹಾಲಿ ಸದಸ್ಯರಾದ ಶಿವರಾಜ ಮೇಸ್ತ ಹೇಳಿದರು.
ಪೌರಕಾರ್ಮಿಕರ ಸೇವೆ ಕುರಿತು ಪಟ್ಟಣ ಪಂಚಾಯತ ಸಿಬ್ಬಂದಿ ವಿನಾಯಕ ಮೇಸ್ತರವರು ತಯಾರಿಸಿದ ಸಾಕ್ಷ್ಯ ಚಿತ್ರ ಇದೇ ವೇಳೆ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯತ ನಿಕಟಪೂರ್ವ ಉಪಾಧ್ಯಕ್ಷೆ ನಿಶಾ ಶೇಟ್,ಮೇಧಾ ನಾಯ್ಕ,ಸದಸ್ಯರಾದ ಜೋಸ್ಬಿನ್ ಡಯಾಸ್,ಸುಭಾಷ್ ಹರಿಜನ್ ಉಪಸ್ಥಿತರಿದ್ದರು.