ಏಕಾಏಕೀ ಅಬ್ಬರಿಸಿದ ಮಳೆರಾಯ.! ಕರೆಂಟ್ ಇಲ್ಲ, ರಸ್ತೆ ಮೇಲೆಲ್ಲಾ ನೀರು.! ವರುಣನ ಅಬ್ಬರಕ್ಕೆ ಜನ ಸುಸ್ತೋ ಸುಸ್ತು.!

ಮುಂಡಗೋಡ: ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆ ಸೋಮವಾರ ಸಾಯಂಕಾಲದಿಂದ ಸುರಿಯುತ್ತಿರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಿರಂತರವಾಗಿ ಸುರಿಯುತ್ತಿದ್ದ ಮಳೆ ಕಳೆದ ಒಂದು ವಾರದಿಂದ ದಿಢೀರನೆ ನಿಂತಿತ್ತು. ಆದರೆ ಸೋಮವಾರ ಸಾಯಂಕಾಲದಿಂದ ಭಾರೀ ಮಳೆ ಆರಂಭಗೊಂಡಿದೆ. ಗ್ರಾಮೀಣ ಭಾಗದಲ್ಲಿ ಚರಂಡಿಗಳು ತುಂಬಿ ಕೆಲ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಯಿತು. ಇನ್ನು ಕೆಲವು ಕಡೆಗಳಲ್ಲಿ ಹಳ್ಳ, ಕೆರೆಗಳಿಗೆ ಹರಿಯುವ ನೀರು ರಸ್ತೆಯ ಮೇಲೆ ಹರಿದು ಜನರು ಓಡಾಡಲಾಗದೆ. ಅಲ್ಲಲ್ಲೇ ನಿಂತು ಮಳೆ ನಿಂತ ಮೇಲೆ ಮನೆ ಸೇರಿದರು.

ಯಲ್ಲಾಪುರ ರಸ್ತೆಯಲ್ಲಿ ಮಳೆಯ ಅಬ್ಬರಕ್ಕೆ ಕಿರಿದಾದ ಸೇತುವೆ ಮೇಲೆ ನೀರು ನಿಂತು ರಸ್ತೆ ಸಂಚಾರ ಬಂದಾಗಿತ್ತು. ಹಾಗೂ ರಾಮಾಪುರ ಸೇತುವೆ ಮೇಲೆ ನೀರು ಹರಿದು ಅಲ್ಲಿನ ಗ್ರಾಮಗಳಿಗೆ ಹೋಗುವ ರಸ್ತೆ ಸಂಪರ್ಕ ಸಂಪೂರ್ಣ ಬಂದಾಗಿದೆ.

ಪಟ್ಟಣದಲ್ಲಿ ಅಪಾರ ಪ್ರಮಾಣದ ಮಳೆಯಾಗಿ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿನ ಕೆಇಬಿ ಹತ್ತಿರ ಹಾಗೂ ಬಂಕಾಪುರ ರಸ್ತೆಯಲ್ಲಿನ ರವಿ ಹೆಗಡೆ ಆಸ್ಪತ್ರೆ, ದೇಸಾಯಿಯವರ ಮನೆಯ ಹತ್ತಿರ ಮುಚ್ಚಂಡಿ, ಮನೆಯ ಹತ್ತಿರ ಪೆಟ್ರೋಲ್ ಬಂಕಗಳ ಹತ್ತಿರದ ರಸ್ತೆಯಲ್ಲಿ ಚರಂಡಿಯ ನೀರು ರಸ್ತೆಯ ಮೇಲೆ ಹರಿಯಿತು. ಇದರಿಂದ ಒಂದು ಘಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಇದರಿಂದ ರಸ್ತೆ ಸಂಪೂರ್ಣ ನೀರಿನಿಂದ ಆವರಿಸಿ ಕೆರೆಯಂತಾಗಿತ್ತು ಕೆಲಕಾಲ ಪಾದಾಚಾರಿಗಳು, ವಾಹನ ಸವಾರರು ನೀರಿನಲ್ಲೆ ಓಡಾಡಿದರು.

ಸೋಮವಾರ ಸಂತೆಯ ದಿನ ಆಗಿದ್ದರಿಂದ ಮಾರುಕಟ್ಟೆಯಲ್ಲಿ ಜನ ಎಲ್ಲೆಂದರಲ್ಲಿ ತಮ್ಮ ರಕ್ಷಣೆ ಮಾಡಿಕೊಳ್ಳಲು ಹರಸಾಹಸಪಟ್ಟರು. ನಾಗರ ಪಂಚಮಿ ಹಬ್ಬದ ಸಂತೆಗೆ ಆಗಮಿಸಿದ ಜನರು ಮಳೆಯಿಂದ ಬೆಸರಗೊಂಡು ಅರ್ಧಂಬರ್ಧ ಸಂತೆ ಮಾಡಿಕೊಂಡು ಮನೆ ಸೇರಿದರು. ಇನ್ನು ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಗಾಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.