ಗೋಕರ್ಣ: ಸಿಟ್ಟು ಎಂಬ ಬೆಂಕಿ ಮೊದಲು ನಮ್ಮನ್ನು ಸುಡುತ್ತದೆ. ಆ ಬಳಿಕ ಇತರರನ್ನು ಸುಡುತ್ತದೆ. ಕ್ರೋಧವೆಂಬ ಬೆಂಕಿ ನಮ್ಮ ಮನಸ್ಸು, ಬದುಕು, ಸಂಬAಧ ಹೀಗೆ ಎಲ್ಲವನ್ನೂ ಸುಡುತ್ತದೆ. ಆದ್ದರಿಂದ ಜೀವನದಲ್ಲಿ ಸಂಯಮ ಎಲ್ಲಕ್ಕಿಂತ ಮುಖ್ಯ. ಸಿಟ್ಟನ್ನು ಗೆಲ್ಲುವ ಶಕ್ತಿಯನ್ನು ಶ್ರೀರಾಮ ನಮಗೆಲ್ಲ ಕರುಣಿಸಲಿ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಸಿಟ್ಟಿನ ಪರಿಣಾಮ ಎಂದೂ ಒಳ್ಳೆಯದಾಗುವುದಿಲ್ಲ. ಸಿಟ್ಟು ಬಂದಾಗ ಆದ ಕೆಟ್ಟ ಕೆಲಸದ ಕಲೆ ಎಂದಿಗೂ ಮಾಸುವುದಿಲ್ಲ. ಸಿಟ್ಟು ಎಷ್ಟೋ ಬಾರಿ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಮನಸ್ಸನ್ನು ಗೆಲ್ಲುವುದು ಯುದ್ಧ ಅಥವಾ ರಾಜ್ಯವನ್ನು ಗೆದ್ದದ್ದಕ್ಕಿಂತ ಮೇಲು. ರಾವಣ ಇಂದ್ರಿಯಗಳನ್ನು ಗೆದ್ದು ವರಗಳನ್ನು ಪಡೆದ. ಆದರೆ ಬಳಿಕ ಇಂದ್ರಿಯಗಳು ರಾವಣನನ್ನು ಗೆದ್ದವು. ರಾವಣ ಕ್ರೋಧದಿಂದ ಅವಿವೇಕಿಯಾಗಿ ಮಾಡಬಾರದ ಪಾಪ ಕಾರ್ಯಗಳನ್ನು ಮಾಡಿದ. ಅದರ ಫಲ ಆತನ ನಾಶ ಎಂದು ಬಣ್ಣಿಸಿದರು.
ಯುಪಿಎಸ್ಸಿ ಪರೀಕ್ಷೆಯಲ್ಲಿ 62 ರ್ಯಾಂಕ್ ಗಳಿಸಿ ಐಎಫ್‌ಎಸ್‌ಗೆ ಆಯ್ಕೆಯಾದ ಅಚವೆಯ ಎಸ್.ನವೀನ್‌ಕುಮಾರ್ ಅವರನ್ನು ಶ್ರೀಗಳು ಸನ್ಮಾನಿಸಿದರು. ಚಾತುರ್ಮಾಸ್ಯ ಅಂಗವಾಗಿ ಸೋಮವಾರ ಎಂ.ಎಂ.ಗಣೇಶ್ ಮತ್ತು ತಂಡದಿಂದ ಭಜನೆ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ ನಡೆಯಿತು.