ಬ್ಯಾಂಕ್ ಸಿಬ್ಬಂದಿಯೆಂದು ಹಣ ಪೀಕಿಸಿದ್ದ ಖತರ್ನಾಕ್ ಗ್ಯಾಂಗ್.! ಖದೀಮರು ಖಾಕಿ ಬಲೆಗೆ ಬಿದ್ದಿದ್ದು ಹೇಗೆ ಗೊತ್ತಾ.?! ನೀವೇನಾದ್ರೂ ಮೋಸ ಹೋಗಿದ್ದೀರಾ.?

ಕಾರವಾರ: 85 ದಿನಗಳಲ್ಲಿ 2.25 ಲಕ್ಷ ರೂ. ನೀಡುವುದಾಗಿ ನಂಬಿಸಿ ಮಹಿಳೆಯೋರ್ವಳಿಂದ 10 ಸಾವಿರ ರೂ. ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಸೋಮವಾರ ಕಾರವಾರದ ಸಿಇಎನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾಗಿದ್ದು ಸದ್ಯ ಕುಮಟಾ ತಾಲೂಕಿನ ನೆಲ್ಲಿಕೇರಿಯಲ್ಲಿ ನೆಲೆಸಿರುವ ಮುಸ್ತಫಾ ಫಕೀರಸಾಬ್ ಶೇಖ್ ಹಾಗೂ ಮಹಮ್ಮದ ರಿಜ್ವಾನ್ ಮುಕ್ತಿಯಾರ್ ಅಹಮದ್ ಬಂಧಿತ ಆರೋಪಿಗಳಾಗಿದ್ದಾರೆ.

ಜುಲೈ 4 ರಂದು ಅಂಕೋಲಾ ತಾಲೂಕಿನ ಅವರ್ಸಾದ ಮಹಿಳೆಯೋರ್ವರಿಗೆ ಕರೆ ಮಾಡಿದ್ದ ಈ ಆರೋಪಿಗಳು ತಾವು ಬ್ಯಾಂಕ್ ಅಧಿಕಾರಿ ಎಂದು ಹೇಳಿ 10 ಸಾವಿರ ರೂ. ತೊಡಗಿಸಿದ್ದಲ್ಲಿ 85 ದಿನಗಳಲ್ಲಿ 2.25 ಲಕ್ಷ ರೂ. ಗಳನ್ನು ಮರಳಿ ನೀಡುವುದಾಗಿ ನಂಬಿಸಿದ್ದರು. ಬಳಿಕ ಮಹಿಳೆಯಿಂದ ಫೋನ್ ಪೇ ಸಂಖ್ಯೆ 9634875076 ಸಂಖ್ಯೆಗೆ ಹಣವನ್ನು ಜಮಾ ಮಾಡಿಸಿಕೊಂಡಿದ್ದರು.

ಆದರೆ ತಾನು ಮೋಸ ಹೋಗಿರುವ ಬಗ್ಗೆ ಅನುಮಾನಗೊಂಡ ಮಹಿಳೆ ಜುಲೈ 31 ರಂದು ಕಾರವಾರದ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡು ಎಸ್‌ಪಿ ಡಾ. ಸುಮನ್ ಪೆನ್ನೇಕರ ಹಾಗೂ ಅಡಿಶನಲ್ ಎಸ್.ಪಿ. ಎಸ್. ಬದರಿನಾಥ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಪಿಎಸ್‌ಐ ನಿತ್ಯಾನಂದ ಪಂಡಿತ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 2 ಮೊಬೈಲಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ಕಾರ್ಯಚರಣೆಯಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ ಠಾಣೆಯ ಸಿಬ್ಬಂದಿಗಳಾದ ಸುದರ್ಶನ ನಾಯ್ಕ, ಮಂಜುನಾಥ ಹೆಗಡೆ, ಮಹೇಶ, ಕೃಷ್ಣ, ರಾಜು, ಚಂದ್ರಶೇಖರ, ಶಿವಾನಂದ, ಹನುಮಂತ, ವಿವೇಕ ಹಾಗೂ ಉಮೇಶ ಪಾಲ್ಗೊಂಡಿದ್ದರು.

ಇನ್ನು ಈ ಆರೋಪಿಗಳು ಬಳಸಿದ ಮೊಬೈಲ್ ಸಂಖ್ಯೆ 748336129 ಹಾಗೂ 9634875076 ಇವುಗಳ ಮೂಲಕ ಯಾವುದೇ ಸಾರ್ವಜನಿಕರು ಮೋಸಕ್ಕೊಳಗಾಗಿದ್ದರೆ ಸಿ.ಇ.ಎನ್ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 9480805267 ಅಥವಾ 08382-222522 ನೇದಕ್ಕೆ ಸಂಪರ್ಕಿಸುವAತೆ ಎಸ್‌ಪಿ ಡಾ. ಸುಮನ್ ಪೆನ್ನೇಕರ ತಿಳಿಸಿದ್ದಾರೆ.