ಮುಂಡಗೋಡ: ಕಾಡು ಹಂದಿಗಳು ಗೋವಿನಜೋಳದ ಗದ್ದೆಗಳಿಗೆ ನುಗ್ಗಿ ಬೆಳೆಯನ್ನ ತಿಂದು ತುಳಿದು ಹಾಳು ಮಾಡುತ್ತಿರುವ ಘಟನೆಗಳು ತಾಲೂಕಿನ ಸಾಲಗಾಂವ, ಅಜ್ಜಳ್ಳಿ ಭಾಗಗಳಲ್ಲಿ ಸತತವಾಗಿ ನಡೆಯುತ್ತಿದೆ. ಆದರೆ ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಸಾಲಗಾಂವ ಗ್ರಾಮದ ಗಣಪತಿ ಬಾಳಮ್ಮನವರ ಅವರಿಗೆ ಸೇರಿದ ಅಜ್ಜಳ್ಳಿಯ ಸರ್ವೇ ನಂಬರ 18 ರಲ್ಲಿ ಬೆಳೆದ ಮೂರು ಎಕರೆ ಗೋವಿನಜೋಳದ ಬೆಳೆಯಲ್ಲಿ ಒಂದು ಎಕರೆ, ಹಾಗೂ ಅಜ್ಜಳ್ಳಿ ಗ್ರಾಮದ ಹಿರಾಚದ್ರ ನಾರ್ವೇಕರ ಎಂಬುವರಿಗೆ ಸೇರಿದ ಗದ್ದೆಯ ಸರ್ವೇ ನಂಬರ 5 ರಲ್ಲಿ ಐದು ಎಕರೆ ಗೋವಿನಜೋಳದ ಬೆಳೆಯನ್ನು ಕಾಡು ಹಂದಿಗಳು ನಾಶ ಮಾಡಿವೆ.
ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿ ಮಳೆಯಿಂದ ಬೆಳೆ ಚೆನ್ನಾಗಿ ಬಂದಿದೆ ಎಂದು ಸಂತಸಪಡುವಷ್ಟರಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾಗುತ್ತಿವೆ. ಪ್ರತಿವರ್ಷ ಕಾಡು ಹಂದಿಗಳು ಹಾನಿ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಕೊಡುತ್ತಾ ಬಂದರೂ ಇದುವರೆಗೆ ಯಾವುದೆ ಪ್ರಯೋಜನ ಆಗಿಲ್ಲವೆಂದು ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಎಚ್ಚೆತ್ತು ರೈತರ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಲು ಪರಿಹಾರ ಒದಗಿಸಬೇಕಾಗಿದೆ ಎಂದು ಸಾಲಗಾಂವ ಗ್ರಾಮದ ಮಾಲತೇಶ ವಾಲ್ಮೀಕಿ ಹೇಳಿದರು.