ಕಾರವಾರ: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಮಸ್ಯೆ ಪರಿಹಾರಕ್ಕೆ ಸಂಪರ್ಕಿಸಿದರೆ ಸಿಗುವುದಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದಾಗ ಇಂದು ಸಭೆಗೆ ಆಗಮಿಸಿದ್ದಿರಿ. ನಿಮ್ಮನ್ನು ಬಿಡುವುದಿಲ್ಲ ಇಲ್ಲಿಯೇ ಕೂಡಿ ಹಾಕಿ ಇವರನ್ನು ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ಜಿಲ್ಲಾಪಂಚಾಯತ ಸಭಾಂಗಣದಲ್ಲಿ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಕೆಂಡಕಾರಿದರು.
ಮಳೆಗಾಲದ ಆರಂಭದಲ್ಲಿ ಗಂಗಾವಳಿ ನದಿಯ ಸೇತುವೆ ಕೆಳಗೆ ಹಾಕಲಾದ ಮಣ್ಣು ತೆರವು ಮಾಡಿ ಉಂಟಾಗಬಹುದಾದ ಪ್ರವಾಹವನ್ನು ತಡೆಯಲು ಸಂಪರ್ಕಿಸಿದರೆ ಇವರ ಫೋನ್ ಕೂಡ ಸ್ವೀಕರಿಸುವುದಿಲ್ಲ. ಜಿಲ್ಲೆಯಲ್ಲಿ ಕೈಗೊಂಡ 7 ಕಾಮಗಾರಿಗಳಿಗೆ ಸರಿಯಾಗಿ ಸಂಪರ್ಕ ರಸ್ತೆಯನ್ನು ನಿರ್ಮಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಇಂದು ಆಗಮಿಸಿದ್ದೀರಿ. ಮಂಜಗುಣಿ ಸೇತುವೆ ಬಳಿ ಹೋಗಿ ಅಲ್ಲಿಯ ಜನರ ಸಮಸ್ಯೆಗೆ ಪರಿಹಾರ ನೀಡಿ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಮಾತನಾಡಿ, ಈ ಇಂಜಿನಿಯರ್ ಅವರನ್ನು ಉತ್ತರಕನ್ನಡಕ್ಕೆ ನೇಮಕ ಮಾಡಿದ್ದರು ಕೂಡ ಇವರು ಹುಬ್ಬಳ್ಳಿಯಲ್ಲಿ ಇರುತ್ತಾರೆ. ಇನ್ನು ಮುಂದೆ ಜಿಲ್ಲೆಯಲ್ಲಿಯೇ ಇರಬೇಕು ಇಲ್ಲದಿದ್ದರೇ, ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದರು.
ಶಾಸಕ ಸುನೀಲ್ ನಾಯ್ಕ ಮಾತನಾಡಿ, ಗೇರುಸೊಪ್ಪಾದಲ್ಲಿ ನಿರ್ಮಿಸುತ್ತಿರುವ ಸೇತುವೆಯ ಹಣೆಬರಹವೂ ಇದೆ. ಕೆಳಗೆ ಓಡಾಡುವುದಕ್ಕೆ ಇದ್ದ ಸೇತುವೆಯನ್ನು ತೆಗೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ, ಜಿ.ಪಂ.ಸಿಇಒ, ಪೊಲೀಸ್ ವರಿಷ್ಟಾಧಿಕಾರಿಗಳು ಉಪಸ್ಥಿತರಿದ್ದರು.
ಆಗಸ್ಟ್ 5 ರಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಲಾಗುವುದು. ಅಧಿಕಾರಿಗಳು ವಾರದಲ್ಲಿ 5 ದಿನ ಇಲ್ಲಿಯೇ ಇರಬೇಕು.
-ಕೋಟ ಶ್ರೀನಿವಾಸ್ ಪೂಜಾರಿ,
ಉಸ್ತುವಾರಿ ಸಚಿವರು, ಉತ್ತರ ಕನ್ನಡ ಜಿಲ್ಲೆ