ಅಂಕೋಲಾ: ನಾಡಿನಾದ್ಯಂತ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಭಕ್ತಾದಿಗಳು ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಿಸುವುದು ವಾಡಿಕೆ. ತಾಲೂಕಿನಲ್ಲಿಯೂ ಗಣೇಶ ಚತುರ್ಥಿ ನಿಮಿತ್ತ ಸಂಭ್ರಮ ಕಳೆಗಟ್ಟಿದೆ. ಮೂಗಿನ ಮೇಲೆ ಬೆರಳುಟ್ಟುಕೊಂಡು ಅಬ್ಬಬ್ಬ ಎನ್ನುವಂತೆ ಇಲ್ಲೊಂದು ಮನೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿಗೆ ಸಿದ್ದರಾಗಿದ್ದಾರೆ. ಈ ಗಣಪ ಚಿನ್ನದ ಕಿರೀಟ ತೊಟ್ಟು, ಕತ್ತಿನಲ್ಲಿ ಚಿನ್ನದ ಹಾರಗಳನ್ನು ಧರಿಸಿ, ಕೈಯಲ್ಲಿ ಚಿನ್ನದ ಗದೆಯನ್ನು ಇಟ್ಟುಕೊಂಡು ಭಕ್ತಾದಿಗಳ ಸಂಕಷ್ಟ ಪರಿಹರಿಸಿ ಇಷ್ಟಾರ್ಥವನ್ನು ನೆರವೇರಿಸಿ ಪವಾಡ ಗಣಪನಾಗಿ ಪೂಜಿತಗೊಂಡು ವಿಜ್ರಂಬಿಸುತ್ತಿದ್ದಾನೆ. ಹೌದು, ದೇಶದಲ್ಲೇ ಗಮನ ಸೆಳೆದ ಆಭರಣ ಪ್ರಿಯ ಗಣಪನ ಆರಾಧನೆಗೆ ಅಂಕೋಲಾ ತಾಲೂಕಿನ ಕಾಕರಮಠದ ಮಹಾಲೆ ಮನೆತನ ವಿಶಿಷ್ಟವಾಗಿ ಸನ್ನದ್ಧಗೊಂಡಿದೆ. ತಂದೆ ಪುಂಡಲಿಕ ಮಹಾಲೆಯಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದ ಗಣೇಶ್ೋತ್ಸವವನ್ನು ಅವರ ಮಕ್ಕಳು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಗಣೇಶ ಹಬ್ಬಕ್ಕೆ ತವರಿಗೆ ಬಂದು ಆಚರಣೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.
ಸ್ವಾತ್ರಂತ್ರ್ಯ ಹೋರಾಟದ ಭಾಗವಾಗಿ ಗಣೇಶೋತ್ಸವ
ದಿವಂಗತ ಪುಂಡಲೀಕ ಮಹಾಲೆ ದೈವದತ್ತ ಕೊಡುಗೆಯಂತೆ ಅರಳಿದ ಮಹಾನ್ ಕಲಾವಿದ. ಅವರ ಕುಂಚದಲ್ಲಿ ಮೂಡಿದ ಸುಂದರ ಕಲಾಕೃತಿಗಳ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಹೇಮಾಮಾಲಿನಿ, ಅನಂತನಾಗ್, ಶಂಕರನಾಗ್ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದಿರಾ ಗಾಂಧಿ ಅವರಿಗೆ ಕೃತಕ ಮಲ್ಲಿಗೆ ಮತ್ತು ಕನಕಾಂಬರ ಹೂವಿನ ಹಾರವನ್ನು ಉಡುಗೊರೆ ನೀಡಿದ್ದರು. ಅದು ನೈಜ ಹಾರದಂತೆ ಕಾಣುತ್ತಿದೆ ಎಂದು ಇಂದಿರಾ ಗಾಂಧಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಮುಂಬೈ ಸ್ಟುಡಿಯೋ ಒಂದರಲ್ಲಿ ಚಿತ್ರನಟಿ ಹೇಮಾಮಾಲಿನಿಯವರ ಭಾವಚಿತ್ರವನ್ನು ಬಿಡಿಸಿದ್ದರಂತೆ ಪುಂಡಲಿಕ ಮಹಾಲೆ. ಅದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಹೇಮಮಾಲಿನಿ 35 ವರ್ಷಗಳ ಹಿಂದೆ ₹ 1111 ಬಹುಮಾನವನ್ನು ನೀಡಿದ್ದರು. ಮೂರ್ತಿ ತಯಾರಿಕೆ ಕಲೆಯನ್ನು ವರವಾಗಿ ಪಡೆದಿದ್ದ ಪುಂಡಲಿಕ ಮಹಾಲೆ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಹಲವು ವಿಡಂಬನಾ ರೂಪಕಗಳನ್ನು ಚೌತಿಯ ವೇಳೆ ಗಣೇಶ ಮೂರ್ತಿಯ ಎದುರಿನಲ್ಲಿ ಪ್ರದರ್ಶಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಲು ಕಾರಣವಾಗಿದ್ದರು. ಅವರ ರೂಪಕಗಳು ಜನಾಕರ್ಷಣೆಯಿಂದ ತುಂಬಿತುಳುಕುತ್ತಿತ್ತು. ಪರಿಣಾಮ ಬ್ರಿಟಿಷರು ಎಚ್ಚರಿಕೆಯನ್ನು ನೀಡಿದ್ದರು. ಹೀಗೆ ಪರಂಪರಾಗತವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮಹಾಲೆ ಮನೆತನ ಪ್ರತಿ ವರ್ಷ ಆರಾಧಿಸುತ್ತಾ ಬಂದಿದೆ.
ಪುಂಡಲಿಕ ಮಹಾಲೆಯವರ ನಂತರ ಅವರ ಮಕ್ಕಳಾದ ರಾಮಕೃಷ್ಣ ಮಹಾಲೆ, ತುಳಸಿದಾಸ ಮಹಾಲೆ, ವಸಂತ ಮಹಾಲೆ, ಶಾಂತರಾಮ ಮಹಾಲೆ ಮತ್ತು ಪ್ರಕಾಶ ಮಹಾಲೆ ಈ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಐವರು ಮಕ್ಕಳು ತಂದೆಯಿಂದ ದೈವದತ್ತವಾಗಿ ಕಲೆಯನ್ನು ರೂಡಿಸಿಕೊಂಡು ಬಂದಿದ್ದಾರೆ. ಕಳೆದ 65 ವರ್ಷಗಳಿಂದ ಮೂರ್ತಿಯನ್ನು ನಾವೇ ತಯಾರಿಸಿ, ಅದನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತೇವೆ. ಮನೆ ಮಂದಿ ಎಲ್ಲಾ ಸೇರಿ ಗಣಪತಿ ಮೂರ್ತಿಗೆ ಬಣ್ಣ ನೀಡುತ್ತೇವೆ. ಇಲ್ಲಿನ ಗಣಪತಿ ಮೂರ್ತಿ ಸ್ವಾಭಾವಿಕ ಗಣಪನಂತೆ ಕಾಣುತ್ತದೆ ಎಂದು ಹಲವರು ಹೇಳುತ್ತಾರೆ. ಹಿರಿಯ ಸಹೋದರರು ವಿವಿಧ ಉದ್ಯೋಗದಲ್ಲಿ ತೊಡಗಿಕೊಂಡಿದ್ದರರಿಂದ ಗಣಪತಿ ಹಬ್ಬದ ಆಚರಣೆಗೆಂದೆ ನಾನು ತಂದೆಯವರ ಅಭಿಲಾಷೆಯಂತೆ ನೌಕರಿ ತ್ಯಜಿಸಬೇಕಾಯಿತು ಎಂದು ಈ ಪರಂಪರೆಯ ನೇತೃತ್ವ ವಹಿಸಿದ ವಸಂತ ಮಹಾಲೆ ಹೇಳುತ್ತಾರೆ.
ಇಷ್ಟಾರ್ಥ ಸಿದ್ಧಿ: ಆಭರಣ ಉಡುಗೊರೆ.
ರಾಜ್ಯ ಮತ್ತು ಹೊರರಾಜ್ಯದ ಭಕ್ತರು ಇಲ್ಲಿನ ಗಣಪತಿ ದೇವರ ದರ್ಶನಕ್ಕೆ ಸಾಗರದಂತೆ ಹರಿದು ಬರುತ್ತಾರೆ. ಇಂದೊಂದು ಪವಾಡ ಗಣಪ ಎನ್ನುವ ವಾಡಿಕೆ ಜನರಲ್ಲಿದೆ. ಕುಟುಂಬದ ಪೂಜೆ ಕೈಂಕರ್ಯಗಳು ನಡೆದರೂ ಸಾರ್ವಜನಿಕರಿಗೆ ಇಲ್ಲಿನ ಗಣಪತಿಯ ದರ್ಶನ ಮಾಡುವುದೇ ಅದೃಷ್ಟ ಎನ್ನುವಂತಾಗಿದೆ. ಮುಂಬೈ ಪುಣೆ ಆಂಧ್ರಪ್ರದೇಶ ರತ್ನಗಿರಿ ಹಾವೇರಿ ದಕ್ಷಿಣ ಕನ್ನಡ ಶಿವಮೊಗ್ಗ ಹೀಗೆ ನಾನಾಕಡೆಯಿಂದ ಭಕ್ತರು ಗಣೇಶ ಚತುರ್ಥಿ ಎಂದು ಇಲ್ಲಿನ ಗಣಪನ ದರ್ಶನ ಮಾಡುತ್ತಾರೆ. ತಮ್ಮ ಸಂಕಷ್ಟಗಳಿಗೆ ಪ್ರಾರ್ಥನೆ ಸಲ್ಲಿಸಿ ಹರಕೆ ಹೊರುತ್ತಾರೆ. ಇಷ್ಟಾರ್ಥಗಳು ಪೂರೈಸುತ್ತಿದ್ದಂತೆ ಹಲವರು ಚಿನ್ನದ ರೂಪದಲ್ಲಿ ದೇವರಿಗೆ ಕಾಣಿಕೆ ನೀಡುತ್ತಿದ್ದಾರೆ. ಪರಿಣಾಮವಾಗಿ ಚಿನ್ನ ಲೇಪಿತ ಕಿರೀಟ, ಚಿನ್ನದ ಹಾರಗಳು, ಚಿನ್ನ ಲೇಪಿತ ಬೃಹತ್ ಗದೆ ಮತ್ತು ಇತರೆ ಚಿನ್ನದ ಆಭರಣಗಳು ಗಣಪನಿಗೆ ಕಾಣಿಕೆಯಾಗಿ ಸಲ್ಲಿಸಲ್ಪಟ್ಟಿವೆ. ಮಾಜಿ ಶಾಸಕಿ ರೂಪಾಲಿ ನಾಯ್ಕ ಸಹ ತಮ್ಮ ಹರಕೆ ಫಲಿಸಿದಕ್ಕೆ ಪ್ರತಿಯಾಗಿ ಈ ಗಣಪನಿಗೆ ಚಿನ್ನದ ಹಾರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಭಕ್ತರು ನೀಡಿದ ಕಾಣಿಕೆಯನ್ನು ಅಚ್ಚುಕಟ್ಟಾಗಿ ದಾಖಲಿಸಿ, ಚಿನ್ನದ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಭದ್ರವಾಗಿ ಇಡುತ್ತೇವೆ. ಹಬ್ಬದ ಸಂದರ್ಭದಲ್ಲಿ ಮಾತ್ರ ಅದನ್ನು ಗಣಪನಿಗೆ ತೊಡಿಸಲಾಗುತ್ತದೆ. ಪೊಲೀಸ್ ಇಲಾಖೆಯು ಸಹ ವಿಶೇಷವಾಗಿ ಸಹಕರಿಸಿ ಪ್ರತಿ ವರ್ಷ ಭದ್ರತೆಯ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ವಿಜಯ ಬ್ಯಾಂಕ್ ಮಾಜಿ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರಕಾಶ ಮಲ್ಯ ತಿಳಿಸಿದರು.