ಅಂಕೋಲಾ: ಕಾರವಾರ -ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್ ನಾಯ್ಕ ಅವರು ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯಿತನ ಸಕಲಬೇಣದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿಕೊಟ್ಟ ನಿವೃತ್ತ ನೌಕರರ ವಿವಿಧೋದ್ದೇಶಗಳ ಸಂಘ (ರಿ ) ಕಟ್ಟಡವನ್ನು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಹಿರಿಯರು ಪ್ರಮುಖರ ಮಾರ್ಗದರ್ಶನ, ಆಶೀರ್ವಾದ ಇದ್ದಾಗ ಮಾತ್ರ ಊರು ಅಭಿವೃದ್ಧಿ ಆಗಲು ಸಾಧ್ಯ. ನಾನು ಕೊಟ್ಟ ಭರವಸೆಯಂತೆ ಇಲ್ಲಿ ಕಟ್ಟಡ ನಿರ್ಮಾಣವಾಗಿದೆ. ಇದೊಂದು ಸಮಾಧಾನದ ಸಂಗತಿಯಾಗಿದೆ. ನಿವೃತ್ತ ಅಧಿಕಾರಿಗಳು, ಶಿಕ್ಷಕರು ಎಲ್ಲರೂ ಸೇರಿ ಸಂಘಟನೆ ಮಾಡಿಕೊಂಡು ಊರಿನ ಅಭಿವೃದ್ಧಿಗೆ ಪ್ರಯತ್ನಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ. ಗುರು ಹಿರಿಯರ ಆಶೀರ್ವಾದ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದರು. ನಾನು ಅಧಿಕಾರದಲ್ಲಿ ಇದ್ದಾಗಲೂ, ಇಲ್ಲದಿದ್ದಾಗಲೂ ಜನರಿಗೇ ಯಾವುದೆ ರೀತಿಯಲ್ಲಿ ಅನ್ಯಾಯವಾಗಬಾರದು ಎಂಬ ನಿಟ್ಟಿನಲ್ಲಿ ಕರ್ತವ್ಯ ಮಾಡುತ್ತೇನೆ. ಜನರ ಹಿತಕ್ಕಾಗಿ, ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನಾನು ಆದ್ಯತೆ ನೀಡುತ್ತೇನೆ ಎಂದು ಹೇಳಿದರು. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ನಿರ್ಮಾಣ ಮಾತ್ರವಲ್ಲ. ಶಿಕ್ಷಣ ಇತರ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಬೇಕು. ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾದರೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಲು ಸಾಧ್ಯ ಎಂದು ಅವರು ತಿಳಿಸಿದರು. ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಪೂರ್ವದಲ್ಲಿ ಕಟ್ಟಡದ ಆವರಣದಲ್ಲಿ ಗಿಡ ನೆಡಲಾಯಿತು. ನೌಕರರ ಸಂಘದಿಂದ ರೂಪಾಲಿ ನಾಯ್ಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಎಮ್ ಎಸ್ ಪ್ರಭು, ಹಾಗೂ ಕಟ್ಟಡ ನಿರ್ಮಾಣಕ್ಕೆ ಸ್ಥಳ ನೀಡಿದ ಚಂದ್ರಕಾಂತ ನಾಯ್ಕ, ನಿವೃತ್ತ ನೌಕರರ ವಿವಿಧೋದ್ದೇಶಗಳ ಸಂಘ (ರಿ) ಅಧ್ಯಕ್ಷ ಸುಭಾಷ ನಾಯ್ಕ, ಸುನಂದಾ ಜೋಶಿ ಮತ್ತು ನಿವೃತ್ತ ನೌಕರರ ವಿವಿಧೋದ್ದೇಶಗಳ ಸಂಘ (ರಿ) ಸದಸ್ಯರು ಗ್ರಾ ಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.