ಅಂಕೋಲಾ: ಚಾಲಕನ ಅತಿವೇಗ ಮತ್ತು ನಿಷ್ಕಾಳಜಿಯಿಂದ ನಿಯಂತ್ರಣ ತಪ್ಪಿದ ಕಾರು ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲ್ಲೂಕಿನ ವಿಟ್ಟಘಾಟ್ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು ಕಾರು ಗುದ್ದಿದ ರಭಸಕ್ಕೆ ಬೈಕಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಉದಯ ನಾರಯಣ ನಾಯ್ಕ(58) ಮೃತಪಟ್ಟಿದ್ದಾರೆ.
ಮೃತ ಉದಯ್ ಕಾರವಾರ ಕಾಜುಭಾಗದ ಗುರುಮಠ ಸಮೀಪದ ನಿವಾಸಿಯಾಗಿದ್ದು ಪಿಗ್ಮಿ ಕಲೆಕ್ಟರ್ ಆಗಿದ್ದರು. ಮಂಗಳವಾರ ಮಧ್ಯಾಹ್ನ ತಮ್ಮ ಮಗಳೊಂದಿಗೆ ಕಾರವಾರದಿಂದ ಅಂಕೋಲಾ ಮಾರ್ಗವಾಗಿ ಸಂಬಂಧಿಕರ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಬಾಳೆಗುಳಿಯಿಂದ ಅಂಕೋಲಾದ ಕಡೆಗೆ ವೇಗವಾಗಿ ಬಂದ ಕಾರು(ಕೆ.ಎ.22 ಸಿ 1396) ಹಿಂದಿನಿಂದ ಉದಯ್ ಅವರ ಹೋಂಡಾ ಡಿಯೋ ಬೈಕಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಉದಯ್ ಮತ್ತು ಮಗಳು ಕೆಳಗೆ ಬಿದ್ದಿದ್ದಾರೆ. ಸಾದಾ ಸ್ವರೂಪದ ಗಾಯಗಳಾಗಿದ್ದ ಅವರ ಮಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಉದಯ್, ತಲೆಗೆ ಗಂಭೀರ ಪ್ರಮಾಣದ ಗಾಯಗಳಾಗಿರುವುದರಿಂದ ಮೂಗಿನಿಂದ ಮತ್ತು ಬಾಯಿಂದ ರಕ್ತಸ್ರಾವಗೊಂಡಿದ್ದು, ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ಅವರ ಮಗಳು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರಿನ ಚಾಲಕ ಧಾರವಾಡ ಜಿಲ್ಲೆಯ ನವಲಗುಂದದ ಪ್ರಶಾಂತ ವೀರಪ್ಪ ಮೆಣಸಿನಕಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಪಿಐ ಸಂತೋಷ್ ಶೆಟ್ಟಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪಿಎಸ್ಐ ಸುನಿಲ್ ಹುಲ್ಗೊಳ್ಳಿ ಮತ್ತು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಕಾನೂನು ಕ್ರಮ ಜರಗಿಸಿದರು. ಎನ್.ಎಚ್.ಎ.ಐ ಅಂಬುಲೆನ್ಸ್ ಚಾಲಕ ನಾಗರಾಜ ಐಗಳ ಮತ್ತು ಸ್ಥಳೀಯರು ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.ಮಾಹಿತಿಯ ಪ್ರಕಾರ ಮೃತ ಉದಯ್ ಮತ್ತು ಮಗಳು ಗಣೇಶ ಚತುರ್ಥಿಗೆಂದು ಸಂಬಂಧಿಯೊಬ್ಬರ ಮನೆಗೆ ತೆರಳುತ್ತಿದ್ದರು. ಹಬ್ಬದ ದಿನವೇ ಯಮರಾಯ ತನ್ನ ಅವಕೃಪೆ ತೋರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.