ಹೊನ್ನಾವರ ತಾಲೂಕಿನಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಸಕಲ ಸಿದ್ಧತೆ

ಹೊನ್ನಾವರ ತಾಲೂಕಿನಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಸಕಲ ಸಿದ್ಧತೆ ನಡೆದಿದ್ದು, ವಿವಿದೆಡೆ ಗಣಪನ ಮೂರ್ತಿಗೆ ಅಂತಿಮ ಹಂತದ ಬಣ್ಣ ನೀಡುವ ಕಾರ್ಯ ನಡೆದಿದ್ದು,ವಿವಿಧ ಭಂಗಿಯಲ್ಲಿ ತರಹೆವಾರಿ ಗಣಪ ಕಂಗೊಳಿಸುತ್ತಿದ್ದಾನೆ.

ಮಣ್ಣಿನ ಮೂರ್ತಿ ತಯಾರಿಕೆಯಂದರೆ ಅದೊಂದು ತಪಸ್ಸು. ಮೊದಲೆಲ್ಲಾ ಹೇರಳವಾಗಿ ಸಿಗುತ್ತಿದ್ದ ಈ ಜೇಡಿ ಮಣ್ಣು ಈಗ ಸಿಗುವುದು ಸ್ವಲ್ಪ ಕಷ್ಟ. ಶಿರಸಿಯ ಹೆಗ್ಗರಣಿಯಿಂದ ಮಣ್ಣನ್ನು ತರುತ್ತಾರೆ. ಮಣ್ಣಿನಲ್ಲಿರುವ ಕಸಕಡ್ಡಿಗಳನ್ನು ಬೇರ್ಪಡಿಸಿ, ಹದಗೊಳಿಸಿ, ಹಂತ ಹಂತವಾಗಿ ಮೂರ್ತಿ ತಯಾರಿಕೆ ಕಾರ್ಯ ಕೈಗೊಳ್ಳಬೇಕು. ಮೂರ್ತಿಗಳನ್ನು ಆಕಾರಕ್ಕೆ ತಕ್ಕಂತೆ ನುಣುಪುಗೊಳಿಸಿ, ಶಾಸ್ತೋಕ್ತ ಪ್ರಮಾಣದಲ್ಲಿ ಅಂಗವಿನ್ಯಾಸ ಮಾಡಿ, ಬಣ್ಣಗಾರಿಕೆ ಮಾಡಬೇಕು. ಈ ಎಲ್ಲ ಹಂತವೂ ಅವಸರದಿಂದ ಆಗುವದಲ್ಲ. ತಿಂಗಳಾನುಗಟ್ಟಲೆ ಕಾಲ ಶ್ರಮವಿರುತ್ತದೆ.ತಾಲೂಕಿನ ಕೆಕ್ಕಾರ,ಕರ್ಕಿ,ಸುಬ್ರಹ್ಮಣ್ಯ ಮತ್ತಿತರೆಡೆ ಗಣಪನ ಮೂರ್ತಿ ತಯಾರಿಕರಿದ್ದಾರೆ. ಮುಗ್ವಾ ಸುಬ್ರಹ್ಮಣ್ಯದಲ್ಲಿ ನಾನ ತರಹದ ಮೂರ್ತಿ ಕಂಗೊಳಿಸುತ್ತಿದೆ. ನೈಸರ್ಗಿಕವಾಗಿ ಸಿಗುವ ಅಂಟು ಮಣ್ಣಿನಿಂದ ರೂಪುಗೊಳ್ಳುವ ಇಲ್ಲಿನ ಗಣಪತಿ ಮೂರ್ತಿಗಳು ರಾಸಾಯನಿಕ ರಹಿತ ಬಣ್ಣ ಲೇಪನದಿಂದ, ಪರಿಸರ ಸ್ನೇಹಿಯಾಗಿ ತಲೆತಲಾಂತರದಿಸಿದ ರೂಪುಗೊಳ್ಳುತ್ತಿರುವುದು ವಿಶೇಷ. ಪುರಾಣ ಕಾಲಘಟ್ಟದಿಂದ ವರ್ತಮಾನದ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಗಣಪತಿಯ ಪೂಜಾ ಮೂರ್ತಿಗಳು ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಣಿಗೊಳ್ಳುತ್ತಿರುತ್ತವೆ.ಯಾವುದೇ ಅಚ್ಚು, ಯಂತ್ರ ಬಳಸದೇ ಕೈಯಾರ ಮೂರ್ತಿ ತಯಾರು ಮಾಡುತ್ತಾರೆ ಎನ್ನುವುದೇ ವಿಶೇಷ. ಒಂದು ಸಾವಿರ ರೂಪಾಯಿಗಳಿಂದ ಹಿಡಿದು 25-30 ಸಾವಿರ ರೂಪಾಯಿಗಳ ವರೆಗೆ ಮೂರ್ತಿಗಳ ಬೆಲೆ ಇದೆ. ಮೂರು ತಿಂಗಳ ಪರಿಶ್ರಮಕ್ಕೆ, ಬಣ್ಣಗಾರಿಕೆಗೆ ಇವು ತೀರಾ ಲಾಭದಾಯಕವಲ್ಲದಿದ್ದರೂ ಕಲಾಪರಂಪರೆ ಉಳಿಸುವುದು, ಇದೊಂದು ಧಾರ್ಮಿಕ ಕೈಂಕರ್ಯ ಎನ್ನುವ ಕಾರಣಕ್ಕೆ ಇದನ್ನು ಶ್ರದ್ಧೆಯಿಂದ ಮುಂದುವರೆಸಿಕೊಂಡು ಬಂದಿದ್ದೇವೆ ಎನ್ನುವುದು ಮೂರ್ತಿ ತಯಾರಿಕರ ಅಭಿಪ್ರಾಯವಾಗಿದೆ.ಇನ್ನೂ ಗಣಪನ ವಿಜ್ರಂಭಣೆಯಿಂದ ಪ್ರತಿಷ್ಠಾಪಿಸಿ,ಪೂಜಿಸಿ,ಆರಾಧಿಸುವ ಕಾರ್ಯಕ್ಕೆ ಸಿದ್ದತೆ ನಡೆಯುತ್ತಿದೆ. ದೀಪಾಲಂಕಾರಗಳಿಂದ,ಥರ್ಮಕೊಲ್ ಗಳಿಂದ ಹಾಗೂ ಇನ್ನಿತರ ಅಲಂಕಾರಿಕ ವಸ್ತುಗಳಿಂದ ಗಣಪನ ಪ್ರತಿಷ್ಠಾಪಿಸುವ ಸ್ಥಳವನ್ನು ಸಿದ್ದತೆಗೊಳಿಸಲಾಗುತ್ತಿದೆ.