ಜೋಯಿಡಾ: ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ್ ಅವರು ಜೋಯಿಡಾ ತಾಲ್ಲೂಕಿಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು. ಜೋಯಿಡಾದ ಅವರ ಈ ಭೇಟಿ ಖಾಸಗಿ ಭೇಟಿಯಾಗಿತ್ತು.
ತಾಲ್ಲೂಕಿನ ಪ್ರಸಿದ್ಧ ಪ್ರಾಕೃತಿಕ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯಲು ಅನೇಕ ರಾಜಕಾರಣಿಗಳು, ಸಿನಿಮಾ ಕಲಾವಿದರು, ಹಲವಾರು ನಟರು, ರಾಜಕೀಯ ಮುಖಂಡರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂದು ಜಗದೀಶ್ ಶೆಟ್ಟರ್ ಅವರು ಗೋವಾ -ಕರ್ನಾಟಕ ಗಡಿಯಲ್ಲಿರುವ ಕುವೇಶಿಯ ಕ್ಯಾನೋಪಿವಾಕ್ ಜೊತೆಗೆ ಸಿದ್ದಾಜಿ ಮಠದಂತಹ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.
ಅಸು ಗ್ರಾಮದಲ್ಲಿರುವ ರಾಘವೇಂದ್ರ ಶೆಟ್ಟಿ ಮಾಲಕತ್ವದ ಹೆರಿಟೇಜ್ ಹೋಂಸ್ಟೇಗೆ ಜಗದೀಶ್ ಶೆಟ್ಟರ್ ಅವರು ಭೇಟಿ ನೀಡಿ ಮಧ್ಯಾಹ್ನದ ಊಟವನ್ನು ಸವಿದರು. ಈ ಸಂದರ್ಭದಲ್ಲಿ ಅವರ ಗೆಳೆಯರಾದ ವಿ.ಆರ್.ಎಸ್ ವೆಂಚರ್ಸಿನ ವ್ಯವಸ್ಥಾಪಕ ನಿರ್ದೇಶಕರಾದ ವಿಜಯಕುಮಾರ್ ಶೆಟ್ಟಿ ಮತ್ತು ರಾಘವೇಂದ್ರ ಶೆಟ್ಟಿ ಅವರ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದರು ಸಂಜೆ ಕ್ಯಾನೋಪಿವಾಕ್‌ನಲ್ಲಿ ನಡೆಯುವುದನ್ನು ಅವರು ಆನಂದಿಸಿದರು ಮತ್ತು ಜೋಯಿಡಾದ ಕಾಡಿನಲ್ಲಿ ಟ್ರಕ್ಕಿಂಗ್ ನಡೆಸಿದರು. ಅದಾದ ನಂತರ ಹುಬ್ಬಳ್ಳಿಗೆ ಮರಳಿದರು.
ಈ ಸಂದರ್ಭದಲ್ಲಿ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿ, ಮುಖಂಡರುಗಳಾದ ವಿನೋದ್ ದೇಸಾಯಿ, ವಿರಾಜ್ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.