ದಾಂಡೇಲಿ ನಗರದ ಜನತಾ ಪ್ರೌಢಶಾಲೆಯ 9 ನೇ ತರಗತಿಯ ಕೆಲ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಕೈಗೆ ಬರೆ ಎಳೆದುಕೊಂಡಿರುವ ಪ್ರಕರಣ ಸಂಚಲನ ಸೃಷ್ಟಿಸಿದೆ.
ದಾಂಡೇಲಿ ನಗರದ ಜನತಾ ಪ್ರೌಢಶಾಲೆಯ 9 ನೇ ತರಗತಿಯ ಕೆಲ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಕೈಗೆ ಬರೆ ಎಳೆದುಕೊಂಡಿರುವ ಪ್ರಕರಣ ಸಂಚಲನ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಐ.ಆರ್.ಗಡ್ಡೇಕರ್ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಜನತಾ ವಿದ್ಯಾಲಯ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪರಿಶೀಲನೆ ನಡೆಸುವ ಮುನ್ನ ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯೋಪಾಧ್ಯಯಿನಿ ಭಾರತಿ ಗೌಡ ಅವರಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಯ್ತು. ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಕೇಳಿ ಈ ಬಗ್ಗೆ ಶಾಲಾ ಮಟ್ಟದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ಕೈಗೆ ಬರೆ ಹಾಕಿಸಿಕೊಂಡ ವಿದ್ಯಾರ್ಥಿಯನರಲ್ಲಿ ಮಾತನಾಡಿಸಿ ಯಾಕೆ, ಹೇಗೆ, ಏನು ಕೇಳಲಾಗಿದ್ದರೂ, ವಿದ್ಯಾರ್ಥಿನಿಯರು ಮನೆಯಲ್ಲಿ ಕೆಲಸ ಮಾಡುವಾಗ, ಬೆಕ್ಕಿನ ಉಗುರು ಪರಚಿರುವುದು, ಗುಲಾಬಿ ಹೂವನ್ನು ಕೊಯ್ಯಲು ಹೋಗುವಾಗ ಗಿಡದ ಮುಳ್ಳು ತಾಗಿರುವುದು ಹೀಗೆ ವಿವಿಧ ಕಾರಣಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಬಲ್ಲಮೂಲಗಳ ಮಾಹಿತಿಯ ಪ್ರಕಾರ ಇದೊಂದು ವಿಚಿತ್ರ ರೀತಿಯ ಆಟವಾಗಿದ್ದು, ತಮಗೆ ತಾವೆ ಹಿಂಸಿಸಿಕೊಂಡು ಸಂತಸ ಪಡುವುದೇ ಈ ಆಟದ ಉದ್ದೇಶ ಇರಬಹುದಾಗಿದೆ. ಮಾಹಿತಿಯ ಪ್ರಕಾರ ಜನತಾ ವಿದ್ಯಾಲಯ ಪ್ರೌಢಶಾಲೆಯ ಒಟ್ಟು 14 ವಿದ್ಯಾರ್ಥಿಗಳು ಕೈಗೆ ಬರೆ ಎಳೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಪೊಲೀಸ್ ಇಲಾಖೆ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಬಹಳ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ. ಪಿಎಸ್ಐ ಐ.ಆರ್.ಗಡ್ಡೇಕರ್ ಹಾಗೂ ಮಕ್ಕಳ ಪಾಲಕರು ಮತ್ತು ಮುಖ್ಯೋಪಾಧ್ಯಯಿನಿ ಭಾರತಿ ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ, ಡಿವೈಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಸ್ಯಾಮಸನ್, ಪತ್ರಕರ್ತ ಸಂದೇಶ್ ಜೈನ್ ಶಾಲೆಯಲ್ಲಿ ನಡೆಯುತ್ತಿರುವ ಕೆಲ ವಿದ್ಯಾಮಾನಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ರು.